“ತಪ್ಪಾಗಿದ್ದರೆ ಕ್ಷಮಿಸಿ ಬಿಡಿ” : ಧೃವಸರ್ಜಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.25- ಉದ್ದೇಶಪೂರ್ವಕವಾಗಿ ಯಾರನ್ನೂ ನೋಯಿಸುವ ಉದ್ದೇಶ ನಮಗಿರಲಿಲ್ಲ. ಆದರೂ ಯಾರಿಗಾದರೂ ನೋವಾಗಿದ್ದರೆ ನಿಮ್ಮ ಮನೆ ಮಗ ಎಂದು ಕ್ಷಮಿಸಿ ಬಿಡಿ ಎಂದು ಪೊಗರು ಚಿತ್ರದ ನಾಯಕ ನಟ ಧೃವ ಸರ್ಜಾ ಮನವಿ ಮಾಡಿದ್ದಾರೆ. ಖಾಸಗಿ ಹೊಟೇಲ್‍ನಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಗರು ಸಿನಿಮಾದ ವಿವಾದ ಮತ್ತು ಆದಾಯದ ಸಂಗ್ರಹದ ಬಗ್ಗೆ ಮಾತನಾಡಿದ ಅವರು, ವಿವಾದಿತ ದೃಶ್ಯಗಳನ್ನು ತೆಗೆದು ಹಾಕಲಾಗಿದೆ. ನಾಳೆಯಿಂದ ಅಥವಾ ನಾಡಿದ್ದಿನಿಂದ ತಿದ್ದುಪಡಿಯಾದ ಚಿತ್ರ ಪ್ರದರ್ಶನಗೊಳ್ಳಲಿದೆ.

ಎಂಟೂವರೆ ನಿಮಿಷ ವಿವಿಧ ದೃಶ್ಯಗಳನ್ನು ಕಡಿತ ಮಾಡಲಾಗಿದೆ. ಇನ್ನಷ್ಟು ಹೊಸ ದೃಶ್ಯಗಳನ್ನು ಸೇರಿಸಲಾಗಿದೆ. ಸಿನಿಮಾಕ್ಕೆ ಮತ್ತಷ್ಟು ವೇಗ ಬಂದಿದೆ. ಎಲ್ಲಿಯೂ ಸೀನ್ ಜಂಪ್ ಆಗದಂತೆ ಎಡಿಟ್ ಮಾಡಲಾಗಿದೆ ಎಂದು ಹೇಳಿದರು. ಬ್ರಾಹ್ಮಣ ಸಮುದಾಯಕ್ಕೆ ನೋವಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ನಿರ್ದೇಶಕ ನಂದಕಿಶೋರ್ ಅವರ ಜತೆ ನಾನೇ ಮಾತನಾಡಿ ಸಿನಿಮಾ ಮಾಡುವುದೇ ಜನರಿಗಾಗಿ.

ಅವರಿಗೆ ನೋವಾಗಿದೆ ಎಂದಾದರೆ ಅದರಲ್ಲಿ ರಾಜಿಯಾಗುವುದೇ ಬೇಡ. ವಿವಾದಿತ ದೃಶ್ಯಗಳನ್ನು ತೆಗೆದು ಹಾಕೋಣ ಎಂದು ಹೇಳಿದ್ದೆ. ಭಾರೀ ಪ್ರಮಾಣದ ಚರ್ಚೆಯಾಗುತ್ತಿದ್ದು , ನಾನು ಮಾತನಾಡದೇ ಇದ್ದುದಕ್ಕೆ ಕಾರಣ ವಿವಾದಿತ ದೃಶ್ಯಗಳನ್ನು ಮೊದಲು ತೆಗೆದು ಹಾಕೋಣ ಎಂದು ಸುಮ್ಮನಿದ್ದೆ. ಈಗ ನಾವು ಆ ಕೆಲಸ ಮಾಡಿದ್ದೇವೆ. ಕನ್ನಡದಲ್ಲಿ ಮಾತ್ರ ಎಡಿಟ್ ಮಾಡಲಾಗಿದೆ. ತೆಲುಗು, ತಮಿಳು ಭಾಷೆಯಲ್ಲಿ ಹಾಗೆಯೇ ಇದೆ ಎಂದು ಹೇಳಿದರು.

ಚಿತ್ರದ ಕಲೆಕ್ಷನ್ ಉತ್ತಮವಾಗಿದೆ. ಈವರೆಗೂ ಸುಮಾರು 45 ಕೋಟಿ ರೂ. ಸಂಗ್ರಹವಾಗಿದೆ. ತೆಲುಗು, ತಮಿಳು ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು. ನಿರ್ದೇಶಕ ನಂದಕಿಶೋರ್, ನಿರ್ಮಾಪಕ ಗಂಗಾಧರ್, ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು.

Facebook Comments