ಬದುಕಿಗೆ ಕಹಿ ಆಗದಿರಲಿ ಮಧುಮೇಹ

ಈ ಸುದ್ದಿಯನ್ನು ಶೇರ್ ಮಾಡಿ

ಮಧುಮೇಹ ಅಥವಾ ಶುಗರ್‍ಗೆ ವೈದ್ಯಕೀಯವಾಗಿ ಡಯಾಬಿಟಿಸ್ ಮೆಲ್ಲಿಟಸ್ ಎಂದು ಹೇಳುತ್ತಾರೆ. ಪುರಾತನ ಭಾರತೀಯ ಶಸ್ತ್ರ ಚಿಕಿತ್ಸಕ ಶುಶ್ರುತ ಈ ಸ್ಥಿತಿಯನ್ನು ಮಧುಮೇಹ ಎಂದು ಕರೆದಿದ್ದ. ಈ ತೊಂದರೆ ಇರುವ ಜನರಲ್ಲಿ ರಕ್ತದ ಗ್ಲೂಕೋಸ್ ಮಟ್ಟ ಸಾಮಾನ್ಯಕ್ಕಿಂತಲೂ ಹೆಚ್ಚಾಗಿರುತ್ತದೆ. ಇದರಿಂದ ಹೆಚ್ಚಿನ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ವಿವರಿಸಲಾಗದ ತೂಕ ನಷ್ಟ, ತ್ವಚೆಯ ಮೇಲೆ ಗುಳ್ಳೆಗಳು, ಗಾಯ ವಾಸಿಯಾಗಲು ನಿಧಾನವಾಗುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಭಾರತದಲ್ಲಿ ಪ್ರಸ್ತುತ ಸುಮಾರು 75 ದಶಲಕ್ಷ ವಯಸ್ಕರಿಗೆ ಮಧುಮೇಹ ಇರುವುದಾಗಿ ಅಂದಾಜು ಮಾಡಲಾಗಿದೆ. ದುರಾದೃಷ್ಟವಶಾತ್ ಕೆಲವರಿಗೆ ಮಧುಮೇಹ ಇರುವುದು ತಿಳಿದಿರುವುದೇ ಇಲ್ಲ. ಮಧುಮೇಹ ಲಕ್ಷಣಗಳ ಬಗ್ಗೆ ಜಾಗೃತಿ ಹೆಚ್ಚಿಸುವುದರಿಂದ ರೋಗ ಬೇಗ ಪತ್ತೆಯಾಗುತ್ತದೆ.

ಜತೆಗೆ ಅತಿಯಾದ ತೂಕ, ಬೊಜ್ಜು ಮೈ, ಆಲಸಿ ಜೀವನ ಶೈಲಿ, ಅನಾರೋಗ್ಯಕರ ಆಹಾರ ಅಭ್ಯಾಸಗಳು, ಕುಟುಂಬದಲ್ಲಿ ಮಧುಮೇಹದ ಇತಿಹಾಸ ಇರುವವರು, ಉನ್ನತ ರಕ್ತದೊತ್ತಡ, ಈ ಹಿಂದೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಮಧುಮೇಹ ಉಂಟಾಗಿದ್ದವರು, ಪಾಲಿಸಿಸ್ಟಿಕ್ ಓವರಿಗಳು, ಹಿರಿಯ ವಯಸ್ಕರು ಮುಂತಾದ ಉನ್ನತ ಅಪಾಯ ಹೊಂದಿರುವ ವ್ಯಕ್ತಿಗಳಿಗೆ ಪರೀಕ್ಷೆಯ ಅವಕಾಶಗಳನ್ನು ಹೆಚ್ಚಿಸಬಹುದು. ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆಗಳನ್ನು ಆಧರಿಸಿ ಮಧುಮೇಹದ ರೋಗ ನಿರ್ಣಯ ಕೈಗೊಳ್ಳಲಾಗುತ್ತದೆ.

ವಿಭಿನ್ನ ರೀತಿಯ ಮಧುಮೇಹಗಳ ಪೈಕಿ ಟೈಪ್ 2 ಅಥವಾ ವಯಸ್ಕರಲ್ಲಿ ಕಂಡು ಬರುವ ಮಧುಮೇಹ ಶೇ.90ಕ್ಕೂ ಹೆಚ್ಚಿನ ಪ್ರಕರಣಗಳಿಗೆ ಕೊಡುಗೆ ನೀಡುತ್ತದೆ. ಇಲ್ಲಿ ದೇಹ ತನ್ನಲ್ಲಿನ ಇನ್ಸುಲಿನ್‍ಅನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುವುದಿಲ್ಲ(ಇನ್ಸುಲಿನ್ ನಿರೋಧಕ). ಕಾಲ ಕಳೆದಂತೆ ಇನ್ಸುಲಿನ್‍ನ ಉತ್ಪಾದನೆ ಕೂಡ ಕಡಿಮೆಯಾಗುತ್ತದೆ. ಟಿಡಿಎಂಗೆ ಜೀವನಶೈಲಿಯಲ್ಲಿನ ಬದಲಾವಣೆಗಳು, ಮಾತ್ರೆಗಳು ಮತ್ತು ಚುಚ್ಚುಮದ್ದಿನ ಔಷಧಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ.

ಟೈಪ್-1 ಮಧುಮೇಹ ಸಾಮಾನ್ಯವಾಗಿ ಮಕ್ಕಳನ್ನು ಕಾಡುತ್ತದೆ. ತಮ್ಮ ದೇಹ ನಿರೋಧಕ ವ್ಯವಸ್ಥೆಯೇ ಪ್ಯಾಂಕ್ರಿಯಾದಲ್ಲಿನ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳ ಮೇಲೆ ದಾಳಿ ಮಾಡುವುದರಿಂದ ಈ ತೊಂದರೆ ಉಂಟಾಗುತ್ತದೆ. ಇದರಿಂದ ತೀವ್ರ ರೀತಿಯ ಇನ್ಸುಲಿನ್ ಕೊರತೆ ಕಾಡುತ್ತದೆ.

ಇಂತಹವರಿಗೆ ಜೀವನದುದ್ದಕ್ಕೂ ಇನ್ಸುಲಿನ್ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿರುತ್ತದೆ. ಗೆಸ್ಟೇಷನಲ್ ಅಥವಾ ಗರ್ಭಾವಸ್ಥೆ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಮಧುಮೇಹ ಮತ್ತು ಇತರೆ ಹೆಚ್ಚು ಅಪರೂಪದ ಮಾದರಿಯ ಮಧುಮೇಹಗಳು ಇತರೆ ಉಳಿದ ಮಧುಮೇಹ ಪ್ರಕರಣಗಳಿಗೆ ಕೊಡುಗೆ ನೀಡುತ್ತವೆ. ವಂಶವಾಹಿ ಸಂಬಂಧಿ ಅಪಾಯದ ಅಂಶಗಳ ಜತೆಗೆ ಕ್ಷಿಪ್ರಗತಿಯ ನಗರೀಕರಣದಿಂದಾಗಿ ಅನಾರೋಗ್ಯಕರ ಜೀವನಶೈಲಿ, ಆಹಾರಾಭ್ಯಾಸಗಳು ಮುಂತಾದವುಗಳಿಂದಾಗಿ ಭಾರತೀಯರಲ್ಲಿ ಟೈಪ್-2 ಮಧುಮೇಹ ಮತ್ತು ಹೃದಯರೋಗ ಕಾಣಿಸಿಕೊಳ್ಳುವ ಅಪಾಯ ಹೆಚ್ಚಾಗಿದೆ.

ಆದ್ದರಿಂದ ಆರೋಗ್ಯಕರ ಆಹಾರಾಭ್ಯಾಸ, ನಿಗದಿತ ವ್ಯಾಯಾಮ ಮುಂತಾದವು ಈ ತೊಂದರೆಯನ್ನು ತಪ್ಪಿಸುವಲ್ಲಿ ಪ್ರಾಮುಖ್ಯತೆ ವಹಿಸುತ್ತವೆ. ಬಾಡಿಮಾಸ್ ಇಂಡೆಕ್ಸ್ (ಬಿಎಂಐ)ಅನ್ನು 23ಕ್ಕೂ ಕಡಿಮೆ ಇಟ್ಟುಕೊಳ್ಳುವುದು ಲಾಭದಾಯಕ. ಜತೆಗೆ ಪುರುಷರಲ್ಲಿ 78 ಸೆಂಟಿ ಮೀಟರ್ ಮತ್ತು ಮಹಿಳೆಯರಲ್ಲಿ 72 ಸೆಂಟಿ ಮೀಟರ್‍ಗಳಿಗೂ ಕಡಿಮೆ ಸೊಂಟದ ಸುತ್ತಳತೆ ಇರುವಂತೆ ನೋಡಿಕೊಳ್ಳಬೇಕು.

ಬಾಲ್ಯದಿಂದಲೇ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಮನೆ ಮತ್ತು ಶಾಲೆಗಳಲ್ಲಿ ಆರೋಗ್ಯಕರ ಆಹಾರ ಸೇವನೆ ಮತ್ತು ನಿಗದಿತವಾಗಿ ಹೊರಾಂಗಣ ದೈಹಿಕ ಚಟುವಟಿಕೆಗಳು ಅಗತ್ಯ. ಪ್ರತಿದಿನ ಕನಿಷ್ಠ 60 ನಿಮಿಷಗಳಷ್ಟು ಸಮಯವನ್ನು ಕ್ರೀಡೆಗಳಲ್ಲಿ ತೊಡಗಿಸಬೇಕು.

ಟಿವಿ, ಕಂಪ್ಯೂಟರ್ ಮುಂತಾದವುಗಳನ್ನು ವೀಕ್ಷಿಸುವ ಸಮಯವನ್ನು ದಿನಕ್ಕೆ ಎರಡು ಗಂಟೆಗಳಿಗೂ ಕಡಿಮೆಯಾಗಿರುವಂತೆ ನಿರ್ಬಂಧಿಸಬೇಕು. ಹಾಳುಮೂಳು ತಿಂಡಿಗಳು, ಸಂಸ್ಕರಿಸಿದ ಆಹಾರಗಳ ಸೇವನೆ ತಪ್ಪಿಸುವುದು ಅತ್ಯಗತ್ಯ. ವಯಸ್ಕರು ದೈಹಿಕ ಚಟುವಟಿಕೆಯನ್ನುನಿಧಾನವಾಗಿ ಆರಂಭಿಸಿ ಹಂತ ಹಂತವಾಗಿ ಹೆಚ್ಚಿಸಿಕೊಳ್ಳಬೇಕು ಎಂದು ಡಾ.ಕಾರ್ತಿಕ್ ಪ್ರಭಾಕರ್ ಸಲಹೆ ನೀಡಿದ್ದಾರೆ.

ಪ್ರತಿ ದಿನ 60 ನಿಮಿಷಗಳಷ್ಟು ವ್ಯಾಯಾಮ ಮಾಡುವುದಲ್ಲದೆ, ವಾರಕ್ಕೆ ಕನಿಷ್ಠ ಐದು ದಿನಗಳು ಬಿರುಸಿನ ನಡಿಗೆ, ಜಾಗಿಂಗ್, ಸೈಕಲ್ ಸವಾರಿ ಮುಂತಾದವುಗಳು ಸೇರಿರುವುದಲ್ಲದೆ, ವೇಟ್ ಟ್ರೇನಿಂಗ್ ಅನ್ನು ಕೂಡ ಚಟುವಟಿಕೆಯಲ್ಲಿ ಸೇರಿಸಿಕೊಳ್ಳಬಹುದಾಗಿದೆ.ಕಾರ್ಯ ಸಂಬಂಧಿತ ಚಟುವಟಿಕೆಗಳು ಅಂದರೆ ಲಿಫ್ಟ್ ಗಳು ಅಥವಾ ಎಸ್ಕಲೇಟರ್‍ಗಳ ಬದಲಿಗೆ ಮೆಟ್ಟಿಲುಗಳನ್ನು ಹತ್ತುವುದು, ಮಧ್ಯಾಹ್ನದ ಭೋಜನದ ಸಮಯದಲ್ಲಿ ಆದಷ್ಟು ನಡೆಯುವ ಅಭ್ಯಾಸ ಮುಂತಾದವುಗಳು ಒಳ್ಳೆಯದು.

ದೈಹಿಕ ವ್ಯಾಯಾಮದ ಜತೆಗೆ ಯೋಗ, ಧ್ಯಾನ ರೂಢಿಸಿಕೊಳ್ಳಬಹುದು. ತೂಕ ಇಳಿಸಿಕೊಂಡು ಆರೋಗ್ಯಕರ ಸಕ್ರಿಯ ಜೀವನಶೈಲಿಯನ್ನು ಅನುಸರಿಸುವುದರಿಂದ ಟೈಪ್-2 ಮಧುಮೇಹ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು.ಮಧುಮೇಹ ಕೇವಲ ರೋಗಿಯ ಮೇಲೆ ಪರಿಣಾಮ ಬೀರುವುದಲ್ಲದೆ, ಕುಟುಂಬದ ಮಾನಸಿಕ, ಸಾಮಾಜಿಕ, ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಮಧುಮೇಹ ಕುರಿತಂತೆ ಕುಟುಂಬದಲ್ಲಿ ಶಿಕ್ಷಣ ಮತ್ತು ಜಾಗೃತಿ ಹೆಚ್ಚಿಸುವುದರಿಂದ ಮಧುಮೇಹ ರೋಗಿಗಳನ್ನು ಕಡಿಮೆ ಮಾಡಬಹುದು.

ಮನೆಯಲ್ಲಿ ಆರೋಗ್ಯಕರ ವಾತಾವರಣವನ್ನು ಪ್ರೋತ್ಸಾಹಿಸುತ್ತದೆ. ಆದ್ದರಿಂದ ಉತ್ತಮ ಜೀವನಶೈಲಿಯನ್ನು ಬೆಂಬಲಿಸುತ್ತದೆ. ಮಧುಮೇಹ ಕುರಿತ ಲಕ್ಷಣಗಳ ಬಗ್ಗೆ ಜಾಗೃತಿ ಇದ್ದರೆ, ಜತೆಗೆ ಚಿಕಿತ್ಸೆಯ ವಿಳಂಬ ಹಾಗೂ ಸಂಕೀರ್ಣ ತೊಂದರೆಗಳು ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು.

ಮಧುಮೇಹವನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡದಿದ್ದರೆ, ಹೃದಯ, ಮೂತ್ರಪಿಂಡ, ಕಣ್ಣುಗಳು, ನರಗಳು, ಕಾಲುಗಳು, ಪಾದಗಳು, ಮೆದುಳು, ಒಸಡುಗಳು ಮುಂತಾದವುಗಳಲ್ಲಿ ಸಂಕೀರ್ಣ ತೊಂದರೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಜನ ಜಾಗೃತಿ ಮೂಡಿಸುವ ಅಗತ್ಯವಿದೆ.

Facebook Comments

Sri Raghav

Admin