40 ಲಕ್ಷ ಮೌಲ್ಯದ 80 ವಜ್ರದ ಹರಳು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.2- ವಜ್ರದ ಹರಳುಗಳನ್ನು ಮಾರಾಟ ಮಾಡಲು ಬಂದಿದ್ದ ಪುತ್ತೂರು ಮೂಲದ ಮೂವರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ 40 ಲಕ್ಷ ಬೆಲೆಯ 80 ವಜ್ರದ ಹರಳುಗಳು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ರವಿಕುಮಾರ್ (54), ಪ್ರವೀಣ್‍ಕುಮಾರ್ (51) ಮತ್ತು ಸುಧೀರ್ (28) ಬಂಧಿತ ಆರೋಪಿಗಳು. ಇವರು ಪುತ್ತೂರು ತಾಲ್ಲೂಕಿನವರು.

ಈ ಮೂವರು ನಿನ್ನೆ ಸಂಜೆ 7.15ರ ಸುಮಾರಿನಲ್ಲಿ ಚಿಕ್ಕಪೇಟೆಯಲ್ಲಿ ವಜ್ರದ ಹರಳುಗಳನ್ನು ಮಾರಾಟ ಮಾಡಲು ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಈ ಮೂವರ ಚಲನ-ವಲನಗಳನ್ನು ಗಮನಿಸಿ ಅವರನ್ನು ಸುತ್ತುವರೆದು ವಶಕ್ಕೆ ತೆಗೆದುಕೊಂಡು ಇವರ ಬಳಿ ಇದ್ದ ಕೆಂಪು ಬಣ್ಣದ ಲೇಡಿಸ್ ಪರ್ಸ್‍ನಲ್ಲಿ ನೀಲಿ ಬಣ್ಣದ ಪೇಪರ್‍ನಲ್ಲಿ ಇದ್ದಂತಹ 80 ವಜ್ರದ ಹರಳುಗಳನ್ನು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಈ ವಜ್ರದ ಹರಳುಗಳನ್ನು ಅಸಲಿಯೇ ಎಂದು ಪರೀಕ್ಷಿಸಲು ತಜ್ಞರೊಬ್ಬರನ್ನು ಕರೆಸಿ ಪರಿಶೀಲಿಸಿದಾಗ ಈ ಹರಳುಗಳು ಕಚ್ಚಾ, ನ್ಯಾಚುರಲ್ ವಜ್ರದ ಹರಳುಗಳು ಎಂದು ಗೊತ್ತಾಗಿದೆ. ಸಿಟಿ ಮಾರ್ಕೆಟ್ ಠಾಣೆ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ ಅವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಈ ಹರಳುಗಳಿಗೆ ಯಾವುದೇ ದಾಖಲಾತಿ ಆರೋಪಿಗಳ ಬಳಿ ಇರಲಿಲ್ಲ.

ಹರಳುಗಳನ್ನು ಎಲ್ಲಿಂದ ತಂದಿದ್ದರು ಎಂಬಿತ್ಯಾದಿ ವಿಚಾರಗಳ ಬಗ್ಗೆ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು ಹಲವು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆರೋಪಿಗಳ ಹಿನ್ನೆಲೆಯನ್ನು ಹಾಗೂ ಈ ಹರಳುಗಳನ್ನು ಎಲ್ಲಿಂದ ತಂದಿದ್ದರು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

 

Facebook Comments