ವಿಧಾನಸಭೆಯಲ್ಲಿಂದು ಆಡಳಿತ- ಪ್ರತಿಪಕ್ಷ ನಡುವೆ ಬೆಲೆ ಏರಿಕೆ ಕದನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15- ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ಏರಿದ ದನಿಯಲ್ಲಿ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು. ನಿಯಮ 69ರ ಅಡಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಡೀಸೆಲ್, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುತ್ತಾ ಯುಪಿಎ ಸರ್ಕಾರದಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ಅಬಕಾರಿ ಸೆಸ್ ವಿಚಾರವನ್ನು ಪ್ರಸ್ತಾಪಿಸುತ್ತಿದ್ದರು.

ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ ಅವರು, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದೀರಿ. ನಮಗೇನೂ ಸಂಬಂಧವಿಲ್ಲ.ನೀವು ಪಾರ್ಲಿಮೆಂಟ್‍ಗೆ ಹೋಗಿದ್ದಿರೇನೋ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ, ಡೀಸೆಲ್, ಪೆಟ್ರೋಲ್ ದರ ಏರಿಕೆ ವಿಚಾರ ಪ್ರಸ್ತಾಪಿಸುತ್ತಿರುವುದಕ್ಕೆ ಆಕ್ಷೇಪಿಸಿದರು.

ಕೇಂದ್ರ ಸರ್ಕಾರದ ನೀತಿ, ಧೋರಣೆ, ತೀರ್ಮಾನಗಳನ್ನು ಶಾಸನಸಭೆಯಲ್ಲಿ ಚಿರ್ಚಿಸಬಹುದೇ? ನಾವು ಹೇಗೆ ಉತ್ತರ ಹೇಳಬೇಕು ಎಂದು ಆಕ್ಷೇಪಿಸಿದರು. ಅಷ್ಟರಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಾತನಾಡಲು ಮುಂದಾದಾಗ ಆಡಳಿತ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು. ಪರಸ್ಪರ ಮಾತನಾಡಲು ಹಲವು ಸದಸ್ಯರು ಎದ್ದುನಿಂತಿದ್ದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಗದ್ದಲದ ನಡುವೆಯೇ ಮಾತನಾಡಿದ ಸುಧಾಕರ್ ಅವರು, ಈ ವಿಚಾರವನ್ನು ನೀವು ಲೋಕಸಭೆಯಲ್ಲಿ ಪ್ರಸ್ತಾಪಿಸಬೇಕಿತ್ತು. ಇಲ್ಲಿ ಅಪ್ರಸ್ತುತ ಎಂದು ಕಾನೂನು ಸಚಿವರೇ ಹೇಳಿದ್ದಾರೆ. ನೀವು ಪ್ರಸ್ತಾಪಿಸಿದ ವಿಚಾರಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ. 1.44 ಲಕ್ಷ ಕೋಟಿ ರೂ. ಬಾಂಡ್ 2005-06ರಿಂದ ನೀಡಲಾಗಿದೆ. ವಾಸ್ತವಾಂಶಗಳನ್ನು ನಾವು ಹೇಳಬೇಕು. ಬೆಲೆ ಏರಿಕೆ ಪ್ರಕ್ರಿಯೆ ನಿರಂತರ ಪ್ರಕ್ರಿಯೆ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.

ಆಗ ಸಿದ್ದರಾಮಯ್ಯ ನಾವು ಕೇಂದ್ರ ಸರ್ಕಾರದ ಮೇಲೆ ಆರೋಪಿಸುತ್ತಿಲ್ಲ. ಬೆಲೆ ಏರಿಕೆ ಸಂಬಂಧಿಸಿದ ವಾಸ್ತಾವಾಂಶಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಸಿಮೆಂಟ್ ಬೆಲೆ ಏರಿಕೆಯಾಗಿದೆ. ಆ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸದಿದ್ದರೆ ಜನರು ನಮ್ಮನ್ನು ಪ್ರಶ್ನಿಸುತ್ತಾರೆ ಎಂದರು. ಅಷ್ಟರಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎರಡೂ ಕಡೆ ಎದ್ದು ನಿಂತು ಮಾತನಾಡುತ್ತಿದ್ದ ಸದಸ್ಯರನ್ನು ಸಮಾಧಾನಪಡಿಸಿ ಕೂರಿಸಿದರು. ಆದರೂ ಮತ್ತೆ ಮತ್ತೆ ಆಡಳಿತ ಮತ್ತು ಕಾಂಗ್ರೆಸ್ ಸದಸ್ಯರ ನಡುವಿನ ಮಾತಿನ ಚಕಮಕಿ ಮುಂದುವರದೇ ಇತ್ತು.

Facebook Comments