ನೂತನ ಜಿಲ್ಲೆ ವಿಜಯನಗರದಲ್ಲಿ ಪ್ರತಿ ಲೀಟರ್ ಡಿಸೇಲ್ ಬೆಲೆ 100.10 ರೂ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.11- ಪೆಟ್ರೋಲ್, ಡಿಸೇಲ್ ಬೆಲೆ ಸತತ ಏಳನೇ ದಿನವೂ ಗಗನಮುಖಿಯಾಗಿದ್ದು, ರಾಜ್ಯದಲ್ಲಿ ಡಿಸೇಲ್ ದರ ಕೂಡ 100 ರೂ. ಗಡಿ ದಾಟಿದೆ. ಇಂದು ಪೆಟ್ರೋಲ್ 30 ಪೈಸೆ, ಡಿಸೇಲ್ 35 ಪೈಸೆ ಏರಿಕೆಯಾಗಿದೆ. ನೂತನ ಜಿಲ್ಲೆ ವಿಜಯನಗರದಲ್ಲಿ ಪ್ರತಿ ಲೀಟರ್ ಡಿಸೇಲ್ ದರ 100.10 ರೂ.ಗಳಷ್ಟಾಗಿದೆ. ಸತತ ಏರಿಕೆ ಮುಂದುವರೆದರೆ ಮುಂದಿನ ಮೂರು ದಿನದಲ್ಲಿ ಬೆಂಗಳೂರು ಸೇರಿದಂತೆ ಇತರ 100 ರೂ. ಗಡಿ ದಾಟಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.

ಪೆಟ್ರೋಲ್ ಕಳೆದ ಮೂರು ತಿಂಗಳ ಹಿಂದೆಯೇ 100 ರೂ. ಗಡಿ ದಾಟಿ ಆಗಿದೆ. ಈಗ ಸರಕು ಸಾಗಾಣಿಕೆಯಲ್ಲಿ ಅತ್ಯಗತ್ಯವಾಗಿರುವ ವಾಣಿಜ್ಯ ಜೀವ ದ್ರವ್ಯ ಡಿಸೇಲ್ ಕೂಡ ಏರಿಕೆಯಾಗುತ್ತಿರುವುದು ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ತನ್ಮೂಲಕ ಹಣದುಬ್ಬರ ಏರಿಕೆಯ ಮುನ್ಸೂಚನೆ ನೀಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‍ಗೆ 82 ಡಾಲರ್ ದಾಟಿದೆ. ಈ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ನಿರಂತರವಾಗಿ ದರ ಹೆಚ್ಚಳ ಮಾಡುತ್ತಲೇ ಇವೆ. ಇತ್ತೀಚೆಗೆ ಮೂರು ಬಾರಿ ದರ ಇಳಿಕೆಯಾಗಿ ನೆಮ್ಮದಿ ನೀಡಿತ್ತು, ಆ ಇಳಿಕೆಯ ಪ್ರಮಾಣ ಸರಾಸರಿ ಒಂದುವರೆ ರೂಪಾಯಿಯಷ್ಟಿತ್ತು.

ಅದಕ್ಕೆ ಪ್ರತಿಯಾಗಿ ಕಳೆದ ಏಳು ದಿನಗಳಿಂದ ನಿರಂತರವಾಗಿ ಕನಿಷ್ಠ 30 ಪೈಸೆಯಷ್ಟು ಹೆಚ್ಚಳ ಮಾಡಲಾಗುತ್ತಿದೆ. ಪೆಟ್ರೋಲ್ ಬೆಲೆ ಕಳೆದ ಒಂದು ವಾರದಲ್ಲಿ ಎರಡು ರೂ.ನಷ್ಟು ಹೆಚ್ಚಳವಾಗಿದೆ. ಡಿಸೇಲ್ ಕನಿಷ್ಟ ಎರಡುವರೆ ರೂಪಾಯಿಯಷ್ಟು ಏರಿಕೆಯಾಗಿದೆ. ಇಳಿಕೆ ಮಾಡಿದ್ದಕ್ಕಿಂತಲೂ ದುಪ್ಪಟ್ಟು ದರ ಒಂದೇ ವಾರದಲ್ಲಿ ಹೆಚ್ಚಳವಾಗಿ ಜನ ಪರದಾಡುವಂತಾಗಿದೆ.

ಕರ್ನಾಟಕದಲ್ಲಿ ಇಂದಿನ ಪೆಟ್ರೋಲ್ ಬೆಲೆ 108.08 ರೂ.ನಷ್ಟಾಗಿದ್ದು, ಡಿಸೇಲ್ 98.89 ರೂ.ಗಳಷ್ಟಾಗಿದೆ. ಇನ್ನು ದೆಹಲಿ, ಮಹರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾ, ತಮಿಳುನಾಡು ಸೇರಿದಂತೆ ಬೇರೆ ಬೇರೆ ಪ್ರದೇಶಗಳಲ್ಲಿ ನಾನಾ ರೀತಿಯಲ್ಲಿ ದರ ಹೆಚ್ಚಳವಾಗಿದೆ. ಆದರೆ ಕನಿಕ್ಷ್ಠಿ ಏರಿಕೆ 30 ಪೈಸೆ ದಾಟಿದೆ. ಕೆಲವೆಡೆ 42 ಪೈಸೆವರೆಗೂ ಏರಿಕೆಯಾಗಿದೆ.

Facebook Comments