ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳಿಂದ ಡಿಸೇಲ್ ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.17- ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಗಳಲ್ಲಿ ನಿಂತಿರುವ ಲಾರಿಗಳಲ್ಲಿ ಡೀಸೆಲ್ ಕದಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.  ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ಗುರಿಯಾಗಿರಿಸಿಕೊಂಡು ಖದೀಮರು ಡೀಸೆಲ್ ಕದಿಯುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ಊಟ ಮಾಡಲೆಂದು ಹಾಗೂ ವಿಶ್ರಾಂತಿಗೆಂದು ಲಾರಿ ಚಾಲಕರು, ಹೋಟೆಲುಗಳು, ಪೆಟ್ರೋಲ್ ಬಂಕುಗಳು, ಡಾಬಾಗಳು, ಸೇರಿದಂತೆ ಇತರ ಕಡೆ ರಸ್ತೆ ಬದಿಯಲ್ಲಿ ವಿಶಾಲವಾಗಿರುವ ಜಾಗಗಳಲ್ಲಿ ಲಾರಿಗಳನ್ನು ನಿಲ್ಲಿಸಿರಿಸಿರುತ್ತಾರೆ.

ಇಂತಹ ಲಾರಿಗಳನ್ನು ಗುರಿಯಾಗಿರಿಸಿಕೊಂಡು ಕುರುವೇಲು ಗ್ರಾಮದವರು ಎನ್ನಲಾದ ನಾಲ್ಕು ಜನರು ಇಂಡಿಕಾ ಕಾರಿನಲ್ಲಿ ಬಂದು ಲಾರಿಗಳ ಡೀಸೆಲ್ ಟ್ಯಾಂಕ್ ಬಳಿ ನಿಲ್ಲಿಸಿ ವಾಹನಗಳ ಸುತ್ತಮುತ್ತ ಲಾರಿಯ ಚಾಲಕರುಗಳ ಚಲನ-ವಲನವನ್ನು ಪರಿಶೀಲಿಸಿ ನಂತರ ಸಿನಿಮೀಯ ರೀತಿಯಲ್ಲಿ ಡೀಸೆಲನ್ನು ತೆಗೆದುಕೊಂಡುಅಲ್ಲಿಂದ ಪರಾರಿಯಾಗುತ್ತಾರೆ.

ಇಂತಹ ಘಟನೆಗಳು ಪದೇಪದೇ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ನಡೆಯುತ್ತಲೇ ಇರುತ್ತವೆ. ದಾಬಸ್‍ಪೇಟೆ, ನೆಲಮಂಗಲ ಸೇರಿದಂತೆ ತುಮಕೂರು ಜಿಲ್ಲಾ ಹಾಗೂ ಚಿತ್ರದುರ್ಗ ಜಿಲ್ಲಾಯ ಗಡಿ ಭಾಗದವರೆಗೂ ಈ ದಂಧೆ ನಡೆಯುತ್ತಲೇ ಇರುವುದು ಕಂಡು ಬಂದಿದೆ.

ರಸ್ತೆ ಬದಿಗಳಲ್ಲಿ ನಿಲ್ಲಿಸಿರುವ ವಾಹನಗಳಲ್ಲಿ ಚಾಲಕರಿಗೆ ಚಳ್ಳೆಹಣ್ಣು ತಿನ್ನಿಸಿ ಡೀಸೆಲ್ ಕದಿಯುವ ಗ್ಯಾಂಗನ್ನು ಈ ಹಿಂದೆ ಶಿರಾ ಗ್ರಾಮಾಂತರ ಡಿವೈಎಸ್ಪಿ ಆಗಿದ್ದ ವೆಂಕಟೇಶ ಸ್ವಾಮಿ, ಈಗ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರಪ್ಪ ಇವರು, ತಾವರೆಕೆರೆ ಪೊಲೀಸ್ ಠಾಣೆ ಶಿರಾ ನಗರ ಠಾಣಾ ಪೊಲೀಸ್ ಠಾಣೆ ವ್ಯಾಪ್ತಿ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ಕೋಲಾ ಪೊಲೀಸ್ ಠಾಣೆ ವ್ಯಾಪ್ತಿ ಕ್ಯಾಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಡೀಸೆಲ್ ಕದಿಯುತಿದ್ದ ಖದೀಮ ರನ್ನ ಮಟ್ಟ ಹಾಕಿದ್ದರು.

ಇದರ ಸಂಬಂಧ ಲಾರಿಯ ಚಾಲಕರು ಪೊಲೀಸ್ ಠಾಣೆಗಳಿಗೆ ದೂರನ್ನು ಸಲ್ಲಿಸಿದ್ದರು. ಕಳೆದ ಸೋಮವಾರ ರಾತ್ರಿ ದಾಬಸ್‍ಪೇಟೆ ಸೇರಿದಂತೆ ವಿವಿಧ ಕಡೆ ನಿಂತಿದ್ದ ಲಾರಿಗಳಲ್ಲಿ ಡೀಸೆಲ್ ಅನ್ನು ಕಳುವು ಮಾಡಿಕೊಂಡು ತುಮಕೂರು ಕಡೆಯ ಬಟವಾಡಿ ಕಡೆ ಬಂದಾಗ ಹೊಸ ಬಡಾವಣೆ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ರಾತ್ರಿ ಗಸ್ತಿನಲ್ಲಿದ್ದಾಗ ಇವರ ಕೈಗೆ ಮಾಲು ಸಮೇತ ಸಿಕ್ಕಿ ಬಿದ್ದಿದ್ದಾರೆ.

ರಾತ್ರಿ ಗಸ್ತಿನಲ್ಲಿದ್ದ ಸಬ್ ಇನ್‍ಸ್ಪೆಕ್ಟರ್ ಅನುಮಾನಸ್ಪದವಾಗಿ ಬಂದ ಇಂಡಿಕಾ ಕಾರನ್ನು ತಡೆದು ಪರಿಶೀಲಿಸಿದಾಗ ಅನುಮಾನಗೊಂಡು ವಾಹನ ಸಮೇತ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ವಿಚಾರಣೆ ಮಾಡಿದಾಗ ಹೊಸದಾಗಿ ಕಳ್ಳತನಕ್ಕೆ ಇಳಿದಿರುವ ಡೀಸೆಲ್ ಕಳ್ಳರು ಎಂದು ಪೊಲೀಸರಿಗೆ ತಿಳಿದು ಬಂದಿದೆ.

ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಹೊಸದೇನಲ್ಲ ಪದೇಪದೇ ಇಲ್ಲಿನ ಕೆಲವು ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂತಹ ಅವಘಡಗಳು ಸಂಭವಿಸುತ್ತಲೇ ಇವೆ.

ಇದು ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಂಶಿಕೃಷ್ಣ ಸೇರಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದ್ದೇಶ್ ಹಾಗೂ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರಿಗೆ ಸಂಪೂರ್ಣ ಮಾಹಿತಿ ಇದ್ದರೂ ಇಂತಹವರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಅನುಮಾನದಿಂದ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿರುವ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಶ್ರಮಕ್ಕೆ ಜಿಲ್ಲಾಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪದೇಪದೇ ಜಿಲ್ಲಾಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಬೇರುಸಮೇತ ಕಿತ್ತು ಹಾಕಬೇಕೆಂದು ನಿರಂತರವಾಗಿ ಪ್ರಯತ್ನ ಪಡುತ್ತಿದ್ದಾರೆ.
ಇನ್ನಾದರೂ ಎಸ್ಪಿ ಅವರು ಡಿಸೇಲ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರವಾಗಿ ತನಿಖೆ ನಡೆಸಿದರೆ ಸತ್ಯಾಸತ್ಯತೆ ಏನೆಂಬುದು ತಿಳಿಯಲಿದೆ.

Facebook Comments