ಹುಷಾರ್, ನೀವು ಡಿಜಿಟಲ್ ವ್ಯಸನಕ್ಕೆ ಬಲಿಯಾಗಬೇಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಇತರ ಸೋಂಕುರಹಿತ ರೋಗಗಳು-ಜೀವನಶೈಲಿಯ ಬದಲಾವಣೆಯ ಕೊಡುಗೆಗಳಾಗಿವೆ. ಶ್ರಮವಿಲ್ಲದ ಜೀವನಶೈಲಿ, ಮಾನಸಿಕ ಒತ್ತಡ, ಅಧಿಕ ಕೆಲಸ, ರಾಸಾಯನಿಕ ವಸ್ತುಗಳ ವ್ಯಸನ ಇತ್ಯಾದಿಯಿಂದ ಈ ರೋಗಗಳು ಕಂಡುಬರುತ್ತವೆ.

ಅದೇ ರೀತಿ ಅತ್ಯಾಧುನಿಕ ತಂತ್ರಜ್ಞಾನಗಳು ಸಹ ಸಮಾಜ ದಲ್ಲಿ ಹೊಸ ರೋಗಗಳ ಸೃಷ್ಟಿಗೆ ಕಾರಣವಾಗಿವೆ. ವೈ-ಫೈ ಮಾರ್ಗಗಳಿಂದ ಹೊರಹೊಮ್ಮುವ ಕಡಿಮೆ ತೀವ್ರತೆಯ ವಿಕಿರಣಗಳಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ವ್ಯಸನದ ಕ್ಷಿತಿಜದಲ್ಲಿ ಉದ್ಭವಿಸಿರುವ ಹೊಸ ಸವಾಲು ಎಂದರೆ ಅದು ಇ-ಅಡಿಕ್ಷನ್ ಅಥವಾ ಡಿಜಿಟಲ್ ಅಡಿಕ್ಷನ್.

ಒಂದು ನಿರ್ದಿಷ್ಟ ಚಟಕ್ಕೆ ಬಲವಾಗಿ ಅಂಟಿಕೊಂಡಿರುವ ದುರಾಭ್ಯಾಸವೇ ವ್ಯಸನ. ಒಂದು ವಸ್ತುವನ್ನು ಪುನರಾವರ್ತಿತ ವಾಗಿ ಹೊಂದಲು ಉಂಟಾಗುವ ದೈಹಿಕ ಮತ್ತು ಮಾನಸಿಕ ಒತ್ತಡದ ಬಲವಂತವನ್ನು ಅಡಿಕ್ಷನ್ ಎನ್ನಬಹುದು.

ಒಂದು ವಸ್ತು ಅಥವಾ ಒಂದು ನಿರ್ದಿಷ್ಟ ಚಟುವಟಿಕೆಯಿಂದ (ಡಿಜಿಟಲ್ ವ್ಯಸನ, ಲೈಂಗಿಕ ಕ್ರಿಯೆ ಅಥವಾ ಜೂಜು) ಉಂಟಾಗುವ ಪುನರಾವರ್ತಿತ ಕ್ರಿಯೆಯ ವ್ಯಸನಕ್ಕೆ ಕಾರಣ ವಾಗುತ್ತದೆ. ಒಂದು ವಸ್ತು ಅಥವಾ ಅನುಭವಕ್ಕಾಗಿ ಉಂಟಾಗುವ ಹಪಾಹಪಿತನದಿಂದಾಗಿ ಮಾರ್ಪಡಿತ ವ್ಯಸನವನ್ನು ಇದು ಸೃಷ್ಟಿಸುತ್ತದೆ.
ವಸ್ತು ಅಥವಾ ಚಟಕ್ಕೆ ಕಾರಣವಾಗುವ ಅನುಭವದಿಂದ ನಡವಳಿಕೆ ಮತ್ತು ವರ್ತನೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬರುತ್ತದೆ.

ಉದಾಹರಣೆಗೆ ಆಲ್ಕೋಹಾಲ್ ಸೇವನೆ. ಮದ್ಯ ಗಂಭೀರ ವ್ಯಸನಕ್ಕೆ ಕಾರಣವಾಗುವ ಒಂದು ವಸ್ತು. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕೆಡುಕುಂಟು ಮಾಡುವ ಜತೆಗೆ ಸಾಮಾಜಿಕ ಸಮಸ್ಯೆಯನ್ನೂ ಸೃಷ್ಟಿಸುತ್ತದೆ.  ವ್ಯಸನವು ಸಮಾಜದಲ್ಲಿನ ಅನಾರೋಗ್ಯಕರ ಸ್ಥಾನಮಾನದ ಪ್ರಮುಖ ಮೂಲವಾಗುತ್ತದೆ. ವ್ಯಸನವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಹದಗೆಡಿಸುವ ಜತೆಗೆ ವ್ಯಕ್ತಿಗತ ದೌರ್ಬಲ್ಯ, ಕೌಟುಂಬಿಕ ಕುಸಿತ, ಸಾಮಾಜಿಕ ಸಮಸ್ಯೆಗಳು ಮತ್ತು ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.

ಮಾರ್ಫಿನ್ ಮತ್ತು ಇತರ ಮಾದಕ ವಸ್ತುಗಳ, ಸಿಕೋಜನ್ ಮೆದುಳಿನ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ದೈಹಿಕ-ಮಾನಸಿಕ ಆರೋಗ್ಯದ ಜತೆಗೆ ಗಂಭೀರ ಸಾಮಾಜಿಕ ಸಮಸ್ಯೆಯನ್ನೂ ಸಹ ಸೃಷ್ಟಿಸುತ್ತದೆ. ವ್ಯಸನ ನಿರ್ವಹಣೆಯಲ್ಲಿ ಎದುರಾಗುವ ದೊಡ್ಡ ಸವಾಲು ಎಂದರೆ ವ್ಯಸನ ಮತ್ತೆ ಮರುಕಳಿಸುವಿಕೆ. ವ್ಯಸನ ವ್ಯಕ್ತಿಯು ಕೆಲಕಾಲ ತನ್ನ ದುಶ್ಚಟವನ್ನು ತ್ಯಜಿಸುತ್ತಾನೆಯಾದರೂ, ಕೆಲ ಸಮಯದ ನಂತರ ಮತ್ತೆ ತನ್ನ ದುರಭ್ಯಾಸ ಮುಂದುವರಿಸುತ್ತಾನೆ.

ಡಿಜಿಟಲ್ ವ್ಯಸನ: 21ನೆ ಶತಮಾನದ ಹೊಸ ವ್ಯಸನವೆಂದರೆ ಅದು ಡಿಜಿಟಲ್ ಅಡಿಕ್ಷನ್. ಇಂದಿನ ಆಧುನಿಕ ಯುಗದಲ್ಲಿ ವ್ಯಕ್ತಿಯು ಡಿಜಿಟಲ್ ತಂತ್ರಜÁ್ಞನವನ್ನು ಬಲವಂತವಾಗಿ ವಿಪರೀತ ಬಳಕೆ ಮಾಡುವ ಚಟವನ್ನು ಇ-ವ್ಯಸನ ಅಥವಾ ಡಿಜಿಟಲ್ ವ್ಯಸನ ಎನ್ನಬಹುದು.

ಈ ಅತ್ಯಾಧುನಿಕ ಸಾಧನಗಳನ್ನು ತನಗೆ ತಾನೇ ಒತ್ತಾಯ ಪೂರ್ವಕವಾಗಿ ಮತ್ತು ಅಗತ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ವ್ಯಕ್ತಿಯು ಬಳಸುತ್ತಾನೆ. ಅಲ್ಲದೆ, ಇದು ಹಾನಿಕಾರಕ ಎಂದು ತಿಳಿಸಿದ್ದರೂತನ್ನ ದಿನನಿತ್ಯ ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಇದರತ್ತ ಆಕರ್ಷಿತನಾಗಿ ಮಿತಿಮೀರಿ ಉಪಯೋಗಿಸುತ್ತಾರೆ. ಇತರ ಎಲ್ಲ ವ್ಯಸನಗಳಲ್ಲಿ ಇರುವಂತೆಯೇ, ಇದೂ ಕೂಡ ವ್ಯಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ.

ಡಿಜಿಟಲ್ ವ್ಯಸನದ ಲಕ್ಷಣಗಳು: ಡಿಜಿಟಲ್ ತಂತ್ರಜ್ಞಾನವು ಇಂದು ಒಂದು ರೀತಿ ಬೇಬಿ ಸಿಟ್ಟರ್ ಆಗಿದೆ. ಅಂದರೆ ಅಂಬೆಗಾಲಿಡುತ್ತಿರುವ ಮಕ್ಕಳೂ ಕೂಡ ಇದರತ್ತ ಆಕರ್ಷಿತವಾಗುತ್ತಿದ್ದಾರೆ. ಅಳುವ ಹಸುಗೂಸು ಅಥವಾ ಮಕ್ಕಳನ್ನು ಸಮಾಧಾನ ಮಾಡಲು ಫೋಷಕರು ಸ್ಮಾರ್ಟ್‍ಫೋನ್‍ಗಳನ್ನು ಬಳಸುತ್ತಾರೆ. ಆಟಿಕೆಗಳಿಗಿಂತ ಮಕ್ಕಳಿಗೆ ಈಗ ಸ್ಮಾರ್ಟ್‍ಫೋನ್‍ಗಳೇ ಬಹು ಆಕರ್ಷಕ ವಸ್ತುಗಳಾಗಿವೆ.

ಮಕ್ಕಳ ಆಹಾರ ಸೇವಿಸುವಂತೆ ಮಾಡಲು ಅಥವಾ ಗಲಾಟೆ ಮಾಡದೆ ಸುಮ್ಮನಿರಿಸುವಂತೆ ಮಾಡಲು ತಾಯಂದಿರು ಮಕ್ಕಳ ಕೈಗೆ ಸ್ಮಾರ್ಟ್‍ಫೋನ್‍ಗಳನ್ನು ನೀಡಿ ತಾವು ಮತ್ತೊಂದು ಫೋನ್‍ಗಳಲ್ಲಿ ಫೇಸ್‍ಬುಕ್ ಅಥವಾ ವಾಟ್ಸ್‍ಅಪ್ ಚಟುವಟಿಕೆಯನ್ನು ಮುಂದುವರಿಸುತ್ತಾರೆ. ಇದು ಫೋಷಕರಿಂದ ಮಕ್ಕಳವರೆಗೆ ಒಂದು ರೀತಿ ವ್ಯಸನವಾಗಿ ಪರಿಣಮಿಸುತ್ತದೆ.  ಇನ್ನು ಆನ್‍ಲೈನ್ ಗೇಮಿಂಗ್‍ಗಳಿಗಂತೂ ಮಕ್ಕಳು ವಿಪರೀತ ಅಡಿಕ್ಟ್ ಆಗುತ್ತಿದ್ದಾರೆ. ಸ್ಮಾರ್ಟ್ ಫೋನ್‍ಗಳಲ್ಲಿ ಅನೇಕ ಮಕ್ಕಳು ನಿರತವಾಗಿರುವುದು ಈಗ ಎಲ್ಲೆಡೆ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ.

ಇದು ಮಕ್ಕಳ ನಿದ್ದೆಯನ್ನು ಗಮನಾರ್ಹ ಮಟ್ಟದಲ್ಲಿ ಕಸಿಯುತ್ತಿರುವುದು ಆತಂಕಕಾರಿ ಸಂಗತಿ. ಮಕ್ಕಳ ಶೈಕ್ಷಣಿಕ, ಆಟೋಟ ಚಟುವಟಿಕೆಗಳು ಮತ್ತು ಇತರ ಆರೋಗ್ಯಕರ ಅಭ್ಯಾಸಗಳನ್ನು ಕಡಿಮೆ ಮಾಡುತ್ತಿವೆ. ಮಕ್ಕಳ ಸ್ಮಾರ್ಟ್‍ಫೋನ್ ವ್ಯಸನಗಳು ಫೋಷಕರಲ್ಲಿ ತೀವ್ರ ಚಿಂತೆಗೆ ಕಾರಣವಾಗುತ್ತಿದೆ. ಅಲ್ಲದೆ, ಇದೇ ಕಾರಣಕ್ಕಾಗಿ ಮಕ್ಕಳಿಗೆ ತಂದೆ-ತಾಯಿ ನಿಂದಿಸಿದಾಗ ಅದು ಕೌಟುಂಬಿಕ ಸಮಸ್ಯೆಗೂ ಎಡೆ ಮಾಡಿಕೊಡುತ್ತಿದೆ.

ವಿಪರೀತ ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ಮಕ್ಕಳಲ್ಲಿ ದುರಭ್ಯಾಸಗಳಿಗೂ ಕಾರಣವಾಗುತ್ತಿದೆ. ನೇತ್ರ ಆಯಾಸ ಮತ್ತು ಮೆದುಳಿನ ಮೇಲೆ ಅನಗತ್ಯ ಒತ್ತಡದ ದುಷ್ಪರಿಣಾಮ ಬೀರುತ್ತಿದೆ. ಇದು ಮಕ್ಕಳು ಮತ್ತು ಪ್ರೌಢರಲ್ಲಿ ಸೋಮಾರಿತನ ಮತ್ತು ಜಡತ್ವಕ್ಕೆ ಕಾರuವಾಗುತ್ತಿದೆ. ಒಂದೇ ಕಡೆ ಕುಳಿತು ಸ್ಮಾರ್ಟ್ ಫೋನ್‍ಗಳಲ್ಲಿ ತಲ್ಲೀನರಾಗುವುದರಿಂದ ದೇಹ ಮತ್ತು ಮನಸ್ಸು ಕ್ರಿಯಾಶೀಲತೆ ಕಳೆದುಕೊಳ್ಳುತ್ತವೆ. ಇನ್ನು ಮಕ್ಕಳು ಟೆಲಿವಿಷನ್ ವ್ಯಸನಕ್ಕೂ ಒಳಗಾಗುತ್ತಿದ್ದಾರೆ.

ಮೂರ್ಖರ ಪೆಟ್ಟಿಗೆಯತ್ತ ಆಕರ್ಷಿತವಾಗುವುರಿಂದ ಅವರು ಇತರ ಉತ್ತಮ ಚಟುವಟಿಕೆಗಳಿಂದ ವಿಚಲಿತವಾಗುತ್ತಾರೆ. ದಿಜಿಟಲ್ ಪರದೆಗಳು ಮಕ್ಕಳನ್ನು ಆಕರ್ಷಿಸುವ ಹೊಸ ಪಿಡುಗಾಗಿ ಪರಿಣಮಿಸುತ್ತಿದೆ. ಗೇಮಿಂಗ್ ಮತ್ತು ಇಂಟರ್‍ಆಕ್ಟೀವ್‍ಗಳಿಂದ ಡಿಜಿಟಲ್ ಪರದೆಯಲ್ಲಿ ಹೆಚ್ಚು ಸಮಯ ಕಳೆಯುವಂತಾಗಿದೆ.
ಇದು ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಡಿಜಿಟಲ್ ಸ್ಕ್ರೀನ್‍ಗಳು ಡೊಪಮೈನ್ ಎಂಬ ಮೆದುಳಿನ ರಾಸಾಯನಿಕವನ್ನು ಹೆಚ್ಚಿಸಲು ನೆರವಾಗುತ್ತಿದೆ.

ಇದರಿಂದ ಉತ್ಸಾಹ ಮತ್ತು ಸಂತಸ ಲಭಿಸಿದರೂ ಇದು ದೀರ್ಘಾವಧಿಗೆ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಡಿಜಿಟಲ್ ವ್ಯಸನದ ವಿವಿಧ ಸ್ವರೂಪಗಳು
ನೊಮೊಫೋಬಿಯಾ: ನಿಮ್ಮ ಫೋನ್ ಇಲ್ಲದಿರುವಿಕೆಯ ಭಯ. ಫೋಮೊ: ಬಳಕೆ ತಪ್ಪಬಹುದು ಎಂಬ ಭಯ (ಮೊದಲ ಓದಿ ಅದನ್ನು ಶೇರ್ ಮಾಡುವ ಬಯಕೆ), ಐಜಿಡಿ: ಇಂಟರ್‍ನೆಟ್ ಗೇಮಿಂಗ್ ಡಿಸ್‍ಆರ್ಡರ್ (ಗಂಟೆಗಟ್ಟಲೇ ಕ್ಯಾಂಡಿಕ್ರಷ್‍ನಂಥ ಇಂಟರ್‍ನೆಟ್ ಗೇಮ್‍ಗಳನ್ನು ಅಡುವಿಕೆ),

ಐಎಡಿ: ಇಂಟರ್‍ನೆಟ್ ಅಡಿಕ್ಷನ್ ಡಿಸಾರ್ಡರ್ (ಅಂತಜರ್ಲ ವ್ಯಸನ ದೋಷ). ಸೆಲ್ಫಿಟಿಸ್: ವಿನಾಕಾರಣ ಸೆಲ್ಫೀ ತೆಗೆದುಕೊಳ್ಳುವ ವ್ಯಸನ (ದಿನಕ್ಕೆ 5ಕ್ಕಿಂತ ಹೆಚ್ಚು ಬಾರಿ ಸೆಲ್ಫಿಗಳನ್ನು ಕ್ಲಿಕ್ಕಿಸುವಿಕೆ). ಎಸ್‍ಎಂಎ: ಸೋಷಿಯಲ್ ಮೀಡಿಯಾ ಅಡಿಕ್ಷನ್ (ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಇನ್ಸ್‍ಟಾಗ್ರಾಂ, ಟ್ವೀಟರ್, ವಾಟ್ಸ್‍ಅಪ್ ಇತ್ಯಾದಿ ವ್ಯಸನ), ಫ್ಯಾಂಟಮ್ ವೈಬ್ರಷನ್ ಸಿಂಡ್ರೋಮ್: ನಿಮ್ಮ ಬಳಿ ಫೋನ್ ಇಲ್ಲದಿದ್ದರೂ, ಅದು ಫೋನ್ ಕಂಪನ ಅಥವಾ ರಿಂಗ್ ಆಗುತ್ತಿದೆ ಎಂದು ಭಾಸವಾಗುವಿದೆ. , ಎಫ್‍ಎಡಿ: ಫೇಸ್ ಬುಕ್ ಅಡಿಕ್ಷನ್ ಡಿಸಾರ್ಡರ್. ಫೇಸ್‍ಬುಕ್‍ನಲ್ಲಿ ನಿಮ್ಮ ಫೋಟೊಗಳನ್ನು ವಿಪರೀತ ಫೋಸ್ಟ್ ಮಾಡುವಿಕೆ ಹಾಗೂ ಅದನ್ನು ಇಷ್ಟಪಟ್ಟು ಪ್ರತಿಕ್ರಿಯಿಸುವವರಿಗಾಗಿ ನಿರೀಕ್ಷಿಸುವಿಕೆ.ಇತರ ವ್ಯಸನಗಳಂತೆಯೇ ಡಿಜಿಟಲ್ ಅಡಿಕ್ಷನ್ ಕೂಡ ಖಂಡಿತ ದುಷ್ಪರಿಣಾಮ ಬೀರುತ್ತದೆ.

Facebook Comments