ಡಿಜಿಟಲ್ ಮೀಡಿಯಾ ಮೇಲೆ ಶೇ.26ರಷ್ಟು ಎಫ್‍ಡಿಐ ಮಿತಿ ಚೀನಿ ನ್ಯೂಸ್ ಆ್ಯಪ್‍ಗಳಿಗೆ ಕಡಿವಾಣ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.17- ಡಿಜಿಟಲ್ ಮೀಡಿಯಾ ಮೇಲೆ ಶೇ.26ರಷ್ಟು ವಿದೇಶಿ ನೇರ ಬಂಡವಾಳ(ಎಫ್‍ಡಿಐ) ಹೂಡಿಕೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನು ಮತ್ತು ನಿಯಮಗಳು ಚೀನಾದ ನ್ಯೂಸ್ ಆ್ಯಪ್‍ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದಾಗಿದೆ.  ಕೇಂದ್ರ ಸರ್ಕಾರ ಈ ಸಂಬಂಧ ನಿನ್ನೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ವಾರ್ತಾ ಸಂಸ್ಥೆಗಳು ಸೇರಿದಂತೆ ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿಗಳನ್ನು ಬಿತ್ತರಿಸುವ ವಿದೇಶಿ ಮಾಧ್ಯಮಗಳು ಕಟ್ಟುನಿಟ್ಟಾಗಿ ಶೇ.26ರಷ್ಟು ಎಫ್‍ಡಿಐ ನಿಯಮವನ್ನು ಪಾಲಿಸಬೇಕೆಂದು ಸ್ಪಷ್ಟಪಡಿಸಿದೆ.

ಅಲ್ಲದೆ ಇಂಥ ಸಂಸ್ಥೆಗಳ ಮುಖ್ಯಸ್ಥರು ಭಾರತೀಯರೇ ಆಗಿರಬೇಕು ಹಾಗೂ ಇಂಥ ಕಂಪನಿಗಳಲ್ಲಿ 60 ದಿನಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ ಎಲ್ಲಾ ವಿದೇಶಿ ಉದ್ಯೋಗಿಗಳು ಭದ್ರತೆ ಕುರಿತ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕೆಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಡೈಲಿಹಂಟ್, ಹೆಲೋ, ಯುಎಸ್ ನ್ಯೂಸ್, ಒಪೆರಾ ನ್ಯೂಸ್, ನ್ಯೂಸ್‍ಡಾಗ್ ಸೇರಿದಂತೆ ಚೀನಿ ಮತ್ತು ವಿದೇಶಿ ಮಾಧ್ಯಮಗಳು ಡಿಜಿಟಲ್ ಮೀಡಿಯಾದಲ್ಲಿ ಸುದ್ದಿಸಂಗತಿಗಳನ್ನು ಬಿತ್ತರಿಸುವಾಗ ಭಾರತದ ಹಿತಾಸಕ್ತಿಯನ್ನು ಕಡ್ಡಾಯವಾಗಿ ಗಮನದಲ್ಲಿಟ್ಟುಕೊಂಡು ಪ್ರಸಾರ ಮಾಡುವಂತೆ ತಾಕೀತು ಮಾಡಿದೆ.

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇಂಥ ವಿದೇಶಿ ಮಾಧ್ಯಮಗಳು ಪ್ರಸಾರ ಮಾಡಿದ ಕೆಲವು ಸುದ್ದಿ ಸಮಾಚಾರಗಳಿಂದ ಭಾರತೀಯರ ಮೇಲೆ ದುಷ್ಪರಿಣಾಮ ಬೀರಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಡಿಜಿಟಲ್ ಮಾಧ್ಯಮದ ಮೂಲಕ ಕಪೋಲಕಲ್ಪಿತ ವರದಿಗಳು, ಅತಿರಂಜಕ ಸುದ್ದಿಗಳು ಮತ್ತು ವಿವಾದಗಳಿಗೆ ಕಾರಣವಾಗುವ ಸಮಾಚಾರಗಳನ್ನು ಯಾವುದೇ ಕಾರಣಕ್ಕೂ ಬಿತ್ತರಿಸದಂತೆ ಚೀನಿ ಮತ್ತು ವಿದೇಶಿ ನ್ಯೂಸ್ ಆ್ಯಪ್‍ಗಳಿಗೆ ಕೇಂದ್ರ ಸರ್ಕಾರ ಕಟ್ಟಪ್ಪಣೆ ಮಾಡಿದೆ.

ಇಂಥ ಸಂಸ್ಥೆಗಳು ಒಂದು ವರ್ಷದೊಳಗೆ ಷೇರು ಪ್ರಾಬಲ್ಯದ ಅಂಕಿಅಂಶಗಳು ಮತ್ತು ಅದರ ವಹಿವಾಟು ಇತ್ಯಾದಿ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ಈ ದಿಟ್ಟ ಕ್ರಮದಿಂದ ಡಿಜಿಟಲ್ ಮಾಧ್ಯಮದ ಮೂಲಕ ಚರ್ವಿತ ಚವರ್ಣ ಸಂಗತಿಗಳು ಮತ್ತು ಸಮಾಚಾರಗಳ ವೈಭವೀಕರಣ ಇತ್ಯಾದಿಗಳಿಗೆ ಕಡಿವಾಣ ಹಾಕಲು ನ್ಯೂಸ್ ಅಪ್ಲಿಕೇಷನ್‍ಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.

Facebook Comments