‘ಕಾಂಗ್ರೆಸ್ ಇರದಿದ್ದರೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಿರಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.21-ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕಾಪಾಡದೆ ಇದ್ದಿದ್ದರೆ ಈ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು.

ನಗರದ ಗಾಂಧಿಭವನದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜನ್ಮದಿನಾಚರಣೆ ನೆನಪಿನೊಂದಿಗೆ ಅವರ ಆದರ್ಶ ಪಾಲಿಸುವ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಸನ್ಮಾನಿಸುವ ಪ್ರೇರಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಲ್ಲದೆ, ಹಿಂದೂ ಮಹಾಸಭಾವೇ ಸ್ವಾತಂತ್ರ್ಯನಂತರ ಅಧಿಕಾರಕ್ಕೆ ಬಂದಿದ್ದರೆ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ.

ಸರ್ವಾಧಿಕಾರಿ ಧೋರಣೆಯನ್ನು ಪಾಲಿಸುವ ಆರ್‍ಎಸ್‍ಎಸ್ ಮತ್ತು ಹಿಂದೂ ಮಹಾಸಭಾದ ನಾಯಕರು ದೇಶವನ್ನು ಬೇರೆಯ ಹಾದಿಗೆ ಕೊಂಡೊಯ್ಯುತ್ತಿದ್ದರು. ಅಖಂಡತೆ, ಸೌಹಾರ್ದತೆ ನಾಶವಾಗುತ್ತಿತ್ತು. ಮೋದಿಯಂಥವರು ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು. ಈಗಿನ ಯುವಜನರಲ್ಲಿ ಮಹಾತ್ಮಗಾಂಧೀಜಿ ಮತ್ತು ಜವಾಹರ್‍ಲಾಲ್ ನೆಹರೂ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳಿವೆ.

ಅವರಿಬ್ಬರೂ ಇಲ್ಲದೆ ಇದ್ದರೆ ಶ್ರೀಲಂಕಾ, ಪಾಕಿಸ್ತಾನ ಭಾರತದಲ್ಲೇ ಇರುತ್ತಿದ್ದವು. ವಿಶಾಲ ಭಾರತ ನಮ್ಮದಾಗಿರುತ್ತಿತ್ತು ಎಂದು ಹಗುರವಾಗಿ ಮಾತನಾಡುತ್ತಾರೆ. ನಾನಾ ದೇಶಗಳನ್ನು ಒಗ್ಗೂಡಿಸಿ ಆ ಸಂದರ್ಭದಲ್ಲಿ ಭಾರತ ರಚನೆಯಾಗಿದೆ. ಈಗ ಮಾತನಾಡುವುದು ಸುಲಭ. ಕಟ್ಟುವ ಹಂತದಲ್ಲಿ ಎಲ್ಲವೂ ಕಷ್ಟ. ಕಾಂಗ್ರೆಸ್ ಕಟ್ಟಿದ ಭಾರತದಲ್ಲೇ ಮೋದಿ ಪ್ರಧಾನಿಯಾಗಿದ್ದಾರೆ. ಆದರೂ ಕಾಂಗ್ರೆಸ್ ವಿರುದ್ಧವೇ ಮಾತನಾಡುತ್ತಾರೆ ಎಂದು ಟೀಕಿಸಿದರು.

ಗಾಂಧೀಜಿಯವರ ಹೋರಾಟದ ನೈತಿಕ ಶಕ್ತಿ ನಮಗೆ ಪ್ರೇರಣೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ಸಾವರ್ಕರ್‍ಗೆ ಭಾರತರತ್ನ ನೀಡುವ ಚರ್ಚೆಯಾಗುತ್ತಿದೆ. ಗಾಂಧಿ ಕೊಂದ ಗೋಡ್ಸೆಗೂ ಭಾರತರತ್ನ ಕೊಡಬಹುದು ಎಂಬ ಅರ್ಥದಲ್ಲಿ ಸಚಿವರೊಬ್ಬರು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದು. ಶ್ರೀಮಂತಿಕೆಯನ್ನು ತೊರೆದು ಸರಳವಾಗಿ ಜೀವಿಸಿದ ಗಾಂಧೀಜಿಯವರ ತತ್ವಗಳನ್ನು ಅನುಸರಿಸಬೇಕು.

Facebook Comments