ಸಿಎಲ್‍ಪಿ ಸ್ಥಾನ ತೊರೆದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುಂಡೂರಾವ್ ಗುಡ್ ಬೈ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.9-ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನೈತಿಕ ಹೊಣೆ ಹೊತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನಕ್ಕೆ ಹಾಗೂ ದಿನೇಶ್‍ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಫಲಿತಾಂಶ ಪ್ರಕಟಗೊಂಡ ನಂತರ ಬಳಿಕ ಇಬ್ಬರೂ ನಾಯಕರು ತುರ್ತು ಪತ್ರಿಕಾಗೋಷ್ಠಿ ನಡೆಸಿ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ.

ಚುನಾವಣೆಯ ಸೋಲಿಗೆ ತಾವು ಜವಾಬ್ದಾರಿ ಹೊರುವುದಾಗಿ ಇಬ್ಬರೂ ನಾಯಕರು ಹೇಳಿದ್ದು, ಮತದಾರರ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ನುಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿ ನಾನು. 15 ಕ್ಷೇತ್ರಗಳಲ್ಲಿ ಜನ ಕೊಟ್ಟಿರುವ ತೀರ್ಪನ್ನು ಗೌರವಿಸುತ್ತೇನೆ ಮತ್ತು ಒಪ್ಪಿಕೊಂಡಿದ್ದೇನೆ ಎಂದರು.

ಪಕ್ಷಾಂತರ ಮಾಡಿ ಹೋದ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ನಾನು ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಘೋಷಿಸಿದರು. ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕÉ್ಷ ಸೋನಿಯಾಗಾಂಧಿ, ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರಿಗೆ ರವಾನಿಸಿರುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸ್ಪೀಕರ್ ರಮೇಶ್‍ಕುಮಾರ್, ವಿಧಾನಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ನಜೀರ್ ಅಹಮ್ಮದ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮತ್ತಿತರರು ಹಾಜರಿದ್ದರು.  ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದಿನೇಶ್‍ಗುಂಡೂರಾವ್, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ನಾವು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಚುನಾವಣೆ ಗೆಲ್ಲಲು ಶಕ್ತಿ ಮೀರಿ ಪ್ರಯತ್ನ ಮಾಡಿದೆವು. ಆದರೆ ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದ್ದಾರೆ.

# ನಿಗೂಢವಾದ ನಡೆ:
ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ಅವರ ರಾಜೀನಾಮೆ ಕಾಂಗ್ರೆಸ್‍ನಲ್ಲಿ ಹಲವಾರು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಸೋಲಿನ ಹೊಣೆಯನ್ನು ಇಬ್ಬರೂ ನಾಯಕರು ಹೊರಬೇಕು, ರಾಜೀನಾಮೆ ನೀಡಬೇಕು ಎಂಬ ಬೇಡಿಕೆಗಳು ಕೇಳಿ ಬರುವ ಮೊದಲೇ ಹುದ್ದೆ ತ್ಯಾಗ ಮಾಡುವ ಮೂಲಕ ಇಬ್ಬರೂ ನಾಯಕರು ಹೊಸ ದಾಳ ಉರುಳಿಸಿದ್ದಾರೆ.

ಈ ಮೂಲಕ ಕಾಂಗ್ರೆಸ್‍ನಲ್ಲಿ ತಮ್ಮ ನಾಯಕತ್ವದ ವಿರುದ್ಧ ಕೇಳಿ ಬರಬಹುದಾದ ಅಪಸ್ವರಗಳಿಗೆ ಆರಂಭದಲ್ಲೇ ಕೌಂಟರ್ ರಿಯಾಕ್ಷನ್ ಮಾಡಿದ್ದಾರೆ. ಪಕ್ಷ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ರಾಜೀನಾಮೆ ಒಪ್ಪಿಕೊಳ್ಳಬೇಕೇ, ಬೇಡವೇ ಎಂಬ ಗೊಂದಲ ಹೈಕಮಾಂಡ್‍ನ್ನು ಕಾಡುತ್ತಿದೆ.

ಒಂದು ವೇಳೆ ರಾಜೀನಾಮೆ ಒಪ್ಪಿಕೊಂಡಿದ್ದೇ ಆದರೆ ಪರ್ಯಾಯ ನಾಯಕರು ಯಾರು ಎಂಬ ಚರ್ಚೆಯೂ ಪ್ರಶ್ನಾರ್ಹವಾಗಿದೆ. ಇಲ್ಲದೆ ಹೋದರೆ ಸಿದ್ದರಾಮಯ್ಯ ಅವರನ್ನೇ ಮುಂದುವರೆಸಿದರೆ ಮೂಲಕಾಂಗ್ರೆಸ್ಸಿಗರು ಅಸಮಾಧಾನಗೊಳ್ಳುವ ಸಾಧ್ಯತೆ ಇದೆ.

ಇತ್ತ ಮೂಲ ಕಾಂಗ್ರೆಸ್‍ನವರನ್ನು ಸಮಾಧಾನಪಡಿಸಬೇಕೋ, ಸಿದ್ದರಾಮಯ್ಯ ಅವರನ್ನು ಮನವೊಲಿಸಬೇಕೋ ಎಂಬ ಗೊಂದಲ ಕಾಂಗ್ರೆಸ್ ಹೈಕಮಾಂಡ್‍ನ್ನು ಕಾಡುತ್ತಿದೆ. ಮುಂದೆ ಒದಗಬಹುದಾದ ರಾಜಕೀಯ ಅಪಾಯಗಳನ್ನು ಅರಿತುಕೊಂಡ ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ಅತ್ಯಂತ ಜಾಣ ನಡೆಯನ್ನು ಅನುಸರಿಸಿದ್ದಾರೆ.

Facebook Comments

Sri Raghav

Admin