ಪಠ್ಯ ಪುಸ್ತಕದಿಂದ ಟಿಪ್ಪು ತೆಗೆದ ಮಾತ್ರಕ್ಕೆ ಇತಿಹಾಸ ಮರೆಸಲು ಸಾಧ್ಯವಿಲ್ಲ : ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.30- ಟಿಪ್ಪು ಸುಲ್ತಾನ್ ಅವರ ಪಠ್ಯವನ್ನು ಶಾಲಾ ಪಠ್ಯಪುಸ್ತಕದಿಂದ ತೆಗೆಯುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ತೀವ್ರವಾಗಿ ವಿರೋಧಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷಗಳಿಗೂ ಅವರದ್ದೇ ಆದ ಸಿದ್ದಾಂತಗಳು ಇರುತ್ತವೆ. ಸಿದ್ದಾಂತ ಆಧಾರಿತವಾಗಿ ವಿರೋಧ ಮಾಡುವುದು ಸಾಮಾನ್ಯ.

ಸಾವರ್ಕರ್ ವಿಷಯವಾಗಿ ಹಾಗೆಂದು ಮಾತ್ರಕ್ಕೆ ನಾವು ಅಧಿಕಾರಕ್ಕೆ ಬಂದಾಕ್ಷಣ ಅವರ ಬಗ್ಗೆ ಇರುವ ಪಾಠಗಳನ್ನು ತೆಗೆದು ಬಿಡಬೇಕೆ ಎಂದು ಪ್ರಶ್ನಿಸಿದರು. ಐತಿಹಾಸಿಕ ಮಹಾನಿಯರ ಬಗ್ಗೆ ಇತಿಹಾಸ ತಿಳಿಯದೆ ಯಡಿಯೂರಪ್ಪ ಅಜ್ಞಾನಿಯಂತೆ ಮಾತನಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ ರಾಷ್ಟ್ರೀಯ,ಅಂತಾರಾಷ್ಟ್ರೀಯ ಮಟ್ಟದ ಪುಸ್ತಕಗಳಲ್ಲೂ ಪಾಠಗಳಿವೆ. ಸಿನಿಮಾಗಳಾಗಿವೆ. ಕರ್ನಾಟಕ ಸರ್ಕಾರ ಪಠ್ಯ ಪುಸ್ತಕದಿಂದ ತೆಗೆದ ಮಾತ್ರಕ್ಕೆ ಇತಿಹಾಸ ಮರೆಸಲು ಸಾಧ್ಯವಿಲ್ಲ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಬಗ್ಗೆ ಹೊಗಳಿಕೆಗಳು ಹಾಗೂ ತೆಗಳಿಕೆಗಳು ಎರಡೂ ಇವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ, ಹಿಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಸೇರಿದಂತೆ ಹಲವಾರು ಮಂದಿ ಟಿಪ್ಪು ಸುಲ್ತಾನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದನ್ನೆಲ್ಲಾ ಮರೆಮಾಚಿ ಇತಿಹಾಸ ತಿರುಚಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ಯುದ್ಧ ಮಾಡುವ ಸಂದರ್ಭದಲ್ಲಿ ಆಗಿನ ಕಾಲದಲ್ಲಿ ಕ್ರಿಶ್ವಿಯನ್, ಮುಸ್ಲಿಂಬರು, ಕೊಡಗಿನವರ ಹತ್ಯೆಗಳಾಗಿವೆ.

ಯುದ್ಧ ಕಾಲದಲ್ಲಿ ನಡೆದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಟಿಪ್ಪು ಇತಿಹಾಸ ಅಳಿಸಲು ಸಾಧ್ಯವಾಗುವುದಿಲ್ಲ. ಪ್ಯಾಸಿಸ್ಟ್‍ಗಳಂತೆ ವರ್ತಿಸದೆ ಇತಿಹಾಸ ತಜ್ಞರ ಜತೆ ಚರ್ಚೆ ಮಾಡಿ ಎಂದು ದಿನೇಶ್‍ಗುಂಡೂರಾವ್ ಸಲಹೆ ನೀಡಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ವಿಷಯವಾಗಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ನಡುವೆ ನಡೆಯುತ್ತಿರುವ ಮಾತಿನ ಯುದ್ಧಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವುಗಳು ಇವೆ. ನಾವು ಎಂದೂ ಅವರ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಆದರೆ, ಜೆಡಿಎಸ್ ಇತಿಹಾಸದಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಉದಾಹರಣೆ ಇವೆ. ಇತ್ತೀಚೆಗೆ ಕುಮಾರಸ್ವಾಮಿ ಅವರು ಕೂಡ ಬಿಜೆಪಿ ಜತೆ ಕೈ ಜೋಡಿಸುವ ಮಾತನಾಡಿದ್ದಾರೆ ಎಂದರು.

ರಾಜಕೀಯವಾಗಿ ಸಿದ್ದಾಂತ ಇಲ್ಲದೇ ಇದ್ದರೆ ಕಷ್ಟಸಾಧ್ಯ. ಜೆಡಿಎಸ್‍ನ ನಿಲುವುಗಳನ್ನು ನಾವು ಒಪ್ಪುವುದಿಲ್ಲ. ನಾವು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತೇವೆ. ಈ ವಿಷಯವಾಗಿ ನಡೆಯುತ್ತಿರುವ ಚರ್ಚೆಗಳು ವೈಯಕ್ತಿಕ ಟೀಕೆಗಳಿಗೆ ದಾರಿ ಮಾಡಿಕೊಡಬಾರದು ಎಂದು ಸಲಹೆ ನೀಡಿದರು.

Facebook Comments