ರೈತರ ವಿಮೆ ಬಾಕಿ ಶೀಘ್ರ ಪಾವತಿಗೆ ದಿನೇಶ್ ಗುಂಡೂರಾವ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.21- ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ರಾಜ್ಯದ 3.73 ಲಕ್ಷ ಫಲಾನುಭವಿಗಳಿಗೆ ವಿಮಾ ಕಂಪೆನಿಗಳು 427 ಕೋಟಿ ಬಾಕಿ ಉಳಿಸಿ ಕೊಂಡಿರುವುದು ದುರದೃಷ್ಟಕರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತು ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿರುವ ಅವರು, ರೈತರಿಗೆ ಕೃಷಿಯೇ ಬದುಕಿನ ಆಧಾರ. ಬದುಕಿನ ಹಳಿ ತಪ್ಪದಿರಲು ಬೆಳೆಗಳಿಗೆ ರೈತರು ವಿಮೆ ಮಾಡಿಸುತ್ತಾರೆ.

ಹೀಗಾಗಿ ವಿಮಾ ಕಂಪೆನಿಗಳು ಇಲ್ಲದ ನೆಪ ಹೇಳಿ ವಿಮೆ ನೀಡದಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಅತಿವೃಷ್ಟಿ ಹಾಗೂ ಪ್ರವಾಹದಿಂದ ರೈತರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಈ ಸಂದರ್ಭದಲ್ಲಿ ವಿಮಾ ಕಂಪೆನಿಗಳು ರೈತರ ವಿಮೆ ಪಾವತಿಸಿ ಕರ್ತವ್ಯ ಮೆರೆಯಬೇಕು.

ರೈತರಿಂದ ಪ್ರೀಮಿಯಂ ಪಾವತಿಸಿಕೊಂಡು ವಿಮೆ ನೀಡದಿದ್ದರೆ ಹೇಗೆ? ಕೃಷಿ ಸಚಿವರು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

Facebook Comments