ಗೋವು ಬಿಜೆಪಿಗೆ ವೋಟು ತರುವ ಕಾಮಧೇನು ಇದ್ದಂತೆ : ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.12- ಕಾಂಗ್ರೆಸ್‍ಗೆ ಗೋಹತ್ಯೆ ಶಾಪವಿದೆ ಎಂಬ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಗೆ ಗೋವು ವೋಟು ತರುವ ಕಾಮಧೇನುವಾಗಿದೆ ಎಂದಿದ್ದಾರೆ.   ಈ ಕುರಿತು ಟ್ವೀಟ್ ಮಾಡಿರುವ ಅವರು, ನಿಜವಾಗಿಯೂ ಬಿಜೆಪಿಯವರಿಗೆ ಗೋವಿನ ಬಗ್ಗೆ ಭಕ್ತಿ ಇದ್ದರೆ ದೇಶಾದ್ಯಂತ ಗೋಹತ್ಯೆ ನಿಷೇಧಿಸುವ ಧೈರ್ಯ ತೋರಲಿ. ಇಲ್ಲವೇ ತಮ್ಮದು ಗೊಡ್ಡು ಭಕ್ತಿ ಎಂದು ಒಪ್ಪಿಕೊಳ್ಳಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‍ಗೆ ಗೋಹತ್ಯೆ ಶಾಪವಿದೆ ಎಂಬ ನಿಮ್ಮ ಹೇಳಿಕೆ ಅಪಕ್ವ ರಾಜಕಾರಣಿಯ ಬಡಬಡಿಕೆಯಂತಿದೆ ಎಂದು ಟೀಕಿಸಿದ್ದಾರೆ. ಗೋ ಶಾಪದ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯಾಧ್ಯಕ್ಷರು ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದಲ್ಲಿ ಎಷ್ಟು ಮೆಟ್ರಿಕ್ ಟ್ರನ್ ಗೋಮಾಂಸ ರಫ್ತಾಗಿದೆ ಎಂಬ ಅಂಕಿ ಅಂಶವನ್ನು ತೆರೆದಿಡಲಿ. ಇವರ ಪ್ರಕಾರ ಗೋಮಾಂಸ ತಿಂದರೆ ಶಾಪ. ಮಾಂಸಕ್ಕಾಗಿ ಗೋವುಗಳನ್ನು ಕೊಂದರೆ ಶಾಪವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಗೋಹತ್ಯೆ ನಿಷೇಧ ಸಮರ್ಥಿಸಿಕೊಳ್ಳುವ ಕಟೀಲ್ ಅವರು, ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಗೋಹತ್ಯೆ ನಿಷೇಧಿಸುವುದಕ್ಕೆ ಯಾಕೆ ಒತ್ತಾಯಿಸುವುದಿಲ್ಲ. ಬಿಜೆಪಿಯವರಿಗೆ ಗೋವು ವೋಟು ತರುವ ಕಾಮಧೇನುವಾಗಿದೆ.  ನಳೀನ್‍ಕುಮಾರ್ ಅವರದು ಎಲುಬಿಲ್ಲದ ನಾಲಿಗೆ ಎಂಬುದು ಸಾಬೀತಾಗಿದೆ.

ಮಹಾತ್ಮಗಾಂಧಿಯನ್ನು ಕೊಂದ ಗೋಡ್ಸೆಯನ್ನು ಬೆಂಬಲಿಸುವ ನೀವು, ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಮಾತನಾಡುವುದು ವರ್ತಮಾನದ ದುರಂತ ಎಂದು ಹೇಳಿದ್ದಾರೆ.ಅಂತರಂಗದಲ್ಲಿ ಗಾಂಧಿ, ಅಂಬೇಡ್ಕರ್‍ನ್ನು ದ್ವೇಷಿಸಿ ಸಾರ್ವಜನಿಕರ ಮುಂದೆ ಹೊಳಗುವ ಮುಖವಾಡವೇಕೆ ಎಂದು ಪ್ರಶ್ನಿಸಿದ್ದಾರೆ.

# ಸೊಕ್ಕಿನ ವರ್ತನೆಗೆ ಅಂಕುಶ:
ಕೃಷಿ ಕಾಯ್ದೆ ಕುರಿತಂತೆ ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಕೇಂದ್ರದ ವರ್ತನೆಗೆ ಅಂಕುಶ ಹಾಕುವಂತಿದೆ. ಕಾಯ್ದೆಗಳು ರೈತರಿಗೆ ಮಾರಕ ಎಂಬ ವಿಚಾರ ಇಡೀ ದೇಶಕ್ಕೆ ತಿಳಿದಿದ್ದರೂ ಜಾರಿ ಮಾಡಲು ಸರ್ಕಾರದ ಹುನ್ನಾರವೇನು? ಕಾಯ್ದೆ ವಿಚಾರದಲ್ಲಿ ಮೊಂಡು ಹಠ ಬಿಟ್ಟು ರೈತ ಸ್ನೇಹಿಯಾಗಿ ನಡೆದುಕೊಳ್ಳಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Facebook Comments