ಬಿಜೆಪಿ ವಿರುದ್ಧ ದಿನೇಶ್‍ಗುಂಡೂರಾವ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.20- ಪ್ರಜಾಪ್ರಭುತ್ವ ವಿರೋಧಿಯಾಗಿ ಸರ್ಕಾರ ಅಸ್ಥಿರಗೊಳಿಸಲು ನಡೆಯುತ್ತಿರುವ ಹುನ್ನಾರಗಳ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದ್ದಾರೆ. ತಾಜ್ ವಿವಂತಾ ಹೊಟೇಲ್‍ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 15 ಮಂದಿ ಶಾಸಕರನ್ನು ಮುಂಬೈನಲ್ಲಿ ಕೂಡಿ ಹಾಕಲಾಗಿದೆ.

ಇದನ್ನು ಪ್ರಶ್ನಿಸಿ ರಾಜ್ಯಪಾಲರು ಬಿಜೆಪಿಗೆ ಪತ್ರ ಬರೆಯಬೇಕಿತ್ತು. ಆದರೆ ಸಮ್ಮಿಶ್ರ ಸರ್ಕಾರಕ್ಕೆ ಪತ್ರ ಬರೆದು ಕುದುರೆ ವ್ಯಾಪಾರ ನಡೆಯುತ್ತಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಕುದುರೆ ವ್ಯಾಪಾರ ಮಾಡುತ್ತಿರುವುದು ಬಿಜೆಪಿಯವರು ಎಂಬುದು ಎಲ್ಲರಿಗೂ ಗೊತ್ತಿದೆ.

ಶ್ರೀಮಂತ ಪಾಟೀಲ್ ಅವರು ಬೆಂಗಳೂರಿನಿಂದ ಹೋಗಿ ದಾಖಲಾಗಿರುವ ಮುಂಬೈನ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸಾ ವಿಭಾಗವೇ ಇಲ್ಲ. ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯಪಾಲರು ಬಿಜೆಪಿಯವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸ್ವಾರ್ಥಕ್ಕಾಗಿ ರಾಜಭವನವನ್ನು ಬಳಸಿಕೊಳ್ಳುತ್ತಿದೆ.

ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಶರವೇಗದಲ್ಲಿ ರಾಜ್ಯಪಾಲರು ಕೆಲಸ ಮಾಡುತ್ತಿರುವ ಹಿಂದಿನ ಮರ್ಮ ಏನು ಎಂಬುದು ಜನಸಾಮಾನ್ಯರಿಗೆ ಅರ್ಥ ವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಈಗಾಗಲೇ ಹೋರಾಟ ಆರಂಭಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡುತ್ತಾರೆ. ಅದನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ರಾಜ್ಯದ ಜನತೆ ನಮ್ಮನ್ನು ನೋಡುತ್ತಿದ್ದಾರೆ ಎಂದು ಅವರು ಹೇಳಿದರು.

ವಿಪ್ ಕುರಿತಂತೆ ಸುಪ್ರೀಂಕೋರ್ಟ್ ಆದೇಶ, ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ನಿಗದಿಪಡಿಸಿರುವ ಸಮಯಾವಕಾಶ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ. ಸೋಮವಾರ ಅದು ವಿಚಾರಣೆಗೆ ಬರಲಿದ್ದು, ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.

Facebook Comments