ಜನರು ದಂಗೆ ಏಳುವ ಮುನ್ನ ಒಕ್ಕಲಿಗರು ಸಿಡಿದಿದ್ದಾರೆ : ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.11- ಕೇಂದ್ರಸರ್ಕಾರದ ದ್ವೇಷದ ರಾಜಕಾರಣದ ವಿರುದ್ಧ ದಿನೇ ದಿನೇ ಜನ ದಂಗೆ ಏಳುತ್ತಿದ್ದಾರೆ. ಇಂದು ಮೊದಲ ಹಂತದಲ್ಲಿ ಒಕ್ಕಲಿಗ ಸಮುದಾಯ ತಿರುಗಿ ಬಿದ್ದಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದ ಬಸವನಗುಡಿ ಬಳಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸೇರಿದವರು ಒಳ್ಳೆಯವ ರಾಗುತ್ತಾರೆ. ವಿರೋಧ ಪಕ್ಷದಲ್ಲಿರುವವರು ಕೆಟ್ಟವರಾಗಿದ್ದಾರೆ. ಬಿಜೆಪಿ ನಾಯಕರು ತಮ್ಮ ಸಿದ್ದಾಂತವನ್ನು ಒಪ್ಪದವರ ವಿರುದ್ದ ರಾಜಕೀಯ ದ್ವೇಷ ಮಾಡುತ್ತಿದ್ದಾರೆ.

ಚಿದಂಬರಂ ಮತ್ತು ಡಿ.ಕೆ.ಶಿವಕುಮಾರ್ ಅವರ ಮೇಲೆ ರಾಜಕೀಯ ದ್ವೇಷದಿಂದಲೇ ಕ್ರಮ ಕೈಗೊಳ್ಳಲಾಗಿದೆ. ಇದು ಜನಕ್ಕೆ ಅರ್ಥವಾಗಿದೆ ಎಂದರು. ಡಿ.ಕೆ.ಶಿವಕುಮಾರ್ ಅವರ ತಾಯಿ, ಮಗಳು, ಬಂಧುಬಳಗದವರನ್ನು ಕೂಡ ವಿಚಾರಣೆಗೊಳಪಡಿಸಲಾಗುತ್ತಿದೆ. ಈ ರೀತಿಯ ಹೇಡಿ ರಾಜಕಾರಣವನ್ನು ಜನ ಸಹಿಸುವುದಿಲ್ಲ.

ಜನ ತಿರುಗಿ ಬಿದ್ದೇ ಬೀಳುತ್ತಾರೆ. ಕಾಂಗ್ರೆಸ್ ಡಿ.ಕೆ.ಶಿವಕುಮಾರ್ ಅವರ ಬೆನ್ನಿಗಿದೆ ಎಂದು ಭರವಸೆ ನೀಡಿದರು. ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಗುಜರಾತ್ ಶಾಸಕರಿಗೆ ರಕ್ಷಣೆ ಕೊಟ್ಟ ನಂತರದ ದಿನಗಳಿಂದಲೂ ಕೇಂದ್ರ ಸರ್ಕಾರ ಡಿಕೆಶಿ ವಿರುದ್ದ ದ್ವೇಷ ಸಾಧಿಸುತ್ತಿತ್ತು.ಅವರನ್ನು ಬಲವಂತವಾಗಿ ಬಿಜೆಪಿಗೆ ಪಕ್ಷಾಂತರ ಮಾಡುವ ಪ್ರಯತ್ನಗಳನ್ನು ಮಾಡಿದ್ದವು.

ಅದಕ್ಕೆ ಒಪ್ಪದೇ ಇದ್ದಾಗ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಒತ್ತಡದ ತಂತ್ರ ಅನುಸರಿಸಲಾಗುತ್ತಿದೆ. ನಮಗೆ ಕಾನೂನಿನ ಮೇಲೆ ನಂಬಿಕೆಯಿದೆ. ಡಿ.ಕೆ.ಶಿವಕುಮಾರ್ ಸಂಕಷ್ಟ ಪರಿಹಾರವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

Facebook Comments