ಆಟೋ-ಟ್ಯಾಕ್ಸಿ ಚಾಲಕರ ಕೊರೋನಾ ಪ್ಯಾಕೇಜ್ ನಿಯಮಾವಳಿ ಸರಳೀಕರಣಕ್ಕೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 21- ಕೊರೊನಾ ಸಂದರ್ಭದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜಿನ ನಿಯಮಾವಳಿಗಳನ್ನು ಸರಳೀಕರಣ ಗೊಳಿಸುವಂತೆ ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣಸವದಿ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್‍ನ ಶಾಸಕ ದಿನೇಶ್‍ಗುಂಡೂರಾವ್ ನೇತೃತ್ವದಲ್ಲಿ ಆದರ್ಶ ಆಟೋ ಚಾಲಕರ ಸಂಘ, ವೋಲಾ, ಊಬರ್ ಆಟೋ ಚಾಲಕರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು, ಸಾರಿಗೆ ಇಲಾಖೆ ಅಧಿಕಾರಿಗಳು ವಿಧಿಸಿರುವ ನಿಯಮಾವಳಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮಾ.1ರಂದು ಹೊರಡಿಸಿರುವ ಆದೇಶದಲ್ಲಿ ಚಾಲಕರ ಆಧಾರ್ ಕಾರ್ಡ್, ಬ್ಯಾಡ್ಜ್ ಮತ್ತು ಮತ್ತು ಬ್ಯಾಂಕ್‍ನ ಮಾಹಿತಿ ಸಾಕು ಎಂದು ಹೇಳಲಾಗಿತ್ತು. ಮಾ.24ರಂದು ಮತ್ತೊಂದು ಆದೇಶ ಹೊರಡಿಸಿ ವಾಹನಗಳ ಸಂಖ್ಯೆ, ಫಿಟ್‍ನೆಸ್ ಸರ್ಟಿಫಿಕೇಟ್ ಸೇರಿದಂತೆ ಹಲವಾರು ಮಾಹಿತಿಗಳನ್ನು ಕೇಳಲಾಗಿದೆ.

ವಾಹನಗಳ ಸಂಖ್ಯೆ ಮತ್ತು ಫಿಟ್‍ನೆಸ್ ಸರ್ಟಿಫಿಕೇಟ್ ಪಡೆದುಕೊಳ್ಳುವ ಅಗತ್ಯವಿಲ್ಲ. ಬಹಳಷ್ಟು ಚಾಲಕರಿಗೆ ಸ್ವಂತ ವಾಹನ ಇಲ್ಲ. ಎರವಲು ಪಡೆದು ಓಡಿಸುತ್ತಿರುತ್ತಾರೆ. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿರುವುದು ಚಾಲಕರಿಗಾಗಿ. ವೃತ್ತಿ ಆಧಾರಿತ ಚಾಲಕರಿಗೆ ಮೊದಲ ಆದ್ಯತೆ ನೀಡಬೇಕೆಂದು ಚರ್ಚೆ ವೇಳೆ ಪದಾಧಿಕಾರಿಗಳು ಸಲಹೆ ನೀಡಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವರು ಸಭೆಯಲ್ಲಿದ್ದ ಸಾರಿಗೆ ಆಯುಕ್ತರಿಗೆ ಸ್ಪಷ್ಟ ಸೂಚನೆ ನೀಡಿ, ಅನಗತ್ಯವಾಗಿ ದಾಖಲೆಗಳನ್ನು ಕೇಳಬಾರದು. ಚಾಲನ ಪರವಾನಗಿ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಮಾಹಿತಿ ಪಡೆದು ಸೌಲಭ್ಯ ಹಂಚಿಕೆಯಾಗಬೇಕು. ಸೇವಾಸಿಂಧು ಆ್ಯಪ್‍ಅನ್ನು ಕೂಡಲೇ ಚಾಲನೆಗೊಳಿಸಿ ಸರ್ಕಾರದ ಸೌಲಭ್ಯ ಚಾಲಕರಿಗೆ ತಲುಪುವಂತೆ ಮಾಡಬೇಕೆಂದು ತಾಕೀತು ಮಾಡಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದಿನೇಶ್‍ಗುಂಡೂರಾವ್, ಸರ್ಕಾರ ಚಾಲಕರ ಕುಟುಂಬಕ್ಕೆ 5 ಸಾವಿರ ರೂ. ಕೊಡುವುದಾಗಿ ಘೋಷಣೆ ಮಾಡಿದೆ. ಆದರೆ, ಈವರೆಗೂ ಯಾರಿಗೂ ಹಣ ತಲುಪಿಲ್ಲ. ಅರ್ಜಿ ಕೂಡ ಆಹ್ವಾನಿಸಿಲ್ಲ. ಅನಗತ್ಯವಾಗಿ ದಾಖಲಾತಿಗಳನ್ನು ಕೇಳಲಾಗಿದೆ. ಷರತ್ತು ವಿಪರೀತವಾಗಿವೆ.

ಈ ಬಗ್ಗೆ ಸಾರಿಗೆ ಸಚಿವರ ಗಮನ ಸೆಳೆಯಲಾಯಿತು. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಂದೆರಡು ದಿನಗಳಲ್ಲಿ ಸೇವಾಸಿಂಧು ಆ್ಯಪ್ ಚಾಲನೆಗೊಳ್ಳಲಿದೆ. ಚಾಲಕರಿಗೆ ನೆರವಾಗುವ ವಿಶ್ವಾಸವಿದೆ ಎಂದರು. ಚಾಲಕರ ಸಂಘದ ಪದಾಧಿಕಾರಿಗಳಾದ ಮಂಜುನಾಥ್, ಗಂಡಸಿ ಸದಾನಂದಸ್ವಾಮಿ, ತನ್ವೀರ್ ಪಾಷಾ, ಚನ್ನಕೇಶವ ಮತ್ತಿತರರು ಈ ಸಂದರ್ಭದಲ್ಲಿದ್ದರು.

Facebook Comments

Sri Raghav

Admin