ಅಧಿವೇಶನದಲ್ಲಿ ಭಾಗವಹಿಸಲು ನಮಗೆ ಯಾವುದೇ ಭಯ ಇಲ್ಲ : ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

Dinesh-Gunduroa--01

ಬೆಂಗಳೂರು, ಡಿ.9- ಅಧಿವೇಶನದಲ್ಲಿ ಭಾಗವಹಿಸಲು ನಮಗೆ ಯಾವುದೇ ಭಯ ಇಲ್ಲ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಅಭೂತಪೂರ್ವ ಜನ ಬೆಂಬಲ ಸಿಕ್ಕಿದೆ. ಇದೇ ಸಂದರ್ಭದಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು. ಎನ್‍ಎಸ್‍ಯುಐ ವತಿಯಿಂದ ಆಯೋಜಿಸಲಾಗಿದ್ದ ಭವಿಷ್ಯದ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಳಗಾವಿ ಅಧಿವೇಶನದಲ್ಲಿ ಬಹುತೇಕ ಕಾಂಗ್ರೆಸ್ ಪ್ರಮುಖ ನಾಯಕರು ಗೈರು ಹಾಜರಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನದಲ್ಲಿ ಭಾಗವಹಿಸಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ಧೈರ್ಯದಿಂದ ಹೋಗುತ್ತೇವೆ. ಸಿದ್ದರಾಮಯ್ಯ ಅವರು 10 ದಿನಗಳ ಹಿಂದೆ ನಿಗದಿಯಾಗಿದ್ದ ಕಾರ್ಯಕ್ರಮದಂತೆ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಡಿ.17ರ ನಂತರ ಅವರು ಅಧಿವೇಶನದಲ್ಲಿ ಭಾಗವಹಿಸುತ್ತಾರೆ. ಬಿಜೆಪಿಯನ್ನು ಎದುರಿಸಲು ನಮ್ಮಲ್ಲಿ ಬಹಳಷ್ಟು ಮಂದಿ ಸಮರ್ಥ ನಾಯಕರಿದ್ದಾರೆ ಎಂದರು.

ನಮಗೆ ಜನಾಶೀರ್ವಾದವಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ. ಅದೇ ಹುಮ್ಮಸ್ಸಿನಲ್ಲಿ ಅಧಿವೇಶನದಲ್ಲಿ ಭಾಗವಹಿಸುತ್ತೇವೆ. ಡಿ.18ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ ಎಂದು ಹೇಳಿದರು.  ಸಭಾಪತಿ ಸ್ಥಾನದ ವಿಷಯವಾಗಿ ಹಿರಿಯ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಚುನಾವಣೆ ಘೋಷಣೆಯಾಗಿದೆ. ನಾಮಪತ್ರ ಸಲ್ಲಿಸಿದವರು ಸಭಾಪತಿ ಆಗುತ್ತಾರೆ ಎಂದರು. ಅಧಿವೇಶನ ಮುಗಿದ ಬಳಿಕ ಡಿ.22ರಂದು ಸಚಿವ ಸಂಪುಟ ವಿಸ್ತರಣೆಯಾಗುವುದು ಖಚಿತ. ಕೆಲವು ಶಾಸಕರು ಅಧಿವೇಶನಕ್ಕೆ ಗೈರು ಹಾಜರಾಗುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಗೈರು ಹಾಜರಿಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ. ಶಾಸಕರು ತಮ್ಮ ಜವಾಬ್ದಾರಿಯನ್ನು ಅರಿತು ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಸಿಎಜಿ ವರದಿ ಉಲ್ಲೇಖಿಸಿ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. 30-40 ಸಾವಿರ ಕೋಟಿ ರೂ. ಹಗರಣ ನಡೆದಿಲ್ಲ. ನಾಲ್ಕು ಬಾರಿ ಶಾಸಕರಾಗಿರುವ ಸಿ.ಟಿ.ರವಿ ಅವರಿಗೂ ಸಿಎಜಿ ವರದಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಬಗ್ಗೆ ಮಾಹಿತಿ ಇಲ್ಲದಿರುವುದು ವಿಷಾದನೀಯ ಎಂದ ಅವರು, ಬಹುಶಃ ಸಿ.ಟಿ.ರವಿ ಅವರಿಗೆ ಬುದ್ದಿ ಕಡಿಮೆಯಾಗಿರಬೇಕು. ಹಾಗಾಗಿ ಬಾಯಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ. ಬಿಜೆಪಿ ಅನಗತ್ಯವಾಗಿ ಬಾಯಿ ಬಡಿದುಕೊಳ್ಳುವುದನ್ನು ನಿಲ್ಲಿಸಬೇಕು ಎಂದರು. ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭವಿಷ್ಯದ ಭಾರತ ಎಂಬ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವ ರೀತಿ ಸರ್ಕಾರ ಬೇಕು, ಯಾವ ಯೋಜನೆಗಳನ್ನು ಅಪೇಕ್ಷಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಈ ಕಾರ್ಯಕ್ರಮವನ್ನು ಎನ್‍ಎಸ್‍ಯುಐನಿಂದ ನಡೆಸಲಾಗುತ್ತಿದೆ. 1500ಕ್ಕೂ ಹೆಚ್ಚು ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುವುದು ಎಂದು ಹೇಳಿದರು.  ದೇಶದಲ್ಲಿ ಸರ್ವಾಧಿಕಾರ ಆಡಳಿತ ಇದೆ. ಇದನ್ನು ತೆಗೆಯಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹಗಲಿರುಳು ಶ್ರಮಿಸಬೇಕೆಂದರು. ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಮಂಜುನಾಥ್, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ರುಚಿಗುಪ್ತ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin