ರಮೇಶ್ ಜಾರಕಿಹೊಳಿ ಅವರ ಮೈನಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ, ಡಿಎನ್ಎ ಕೂಡಾ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.25- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೈನಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಅವರ ಡಿಎನ್ಎ ಕೂಡಾ ಕಾಂಗ್ರೆಸ್. ವೈಯಕ್ತಿಕ ನೋವಿಗೆ ಬಿಜೆಪಿ ಮಾತು ಕೇಳಿ ತಪ್ಪು ನಿರ್ಧಾರ ತೆಗೆದುಕೊಂಡರೆ ಮುಂದೆ ಅವರಿಗೆ ತೊಂದರೆಯಾಗಲಿದೆ ಎಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಯಾವತ್ತು ಅನ್ಯಾಯ ಮಾಡಿಲ್ಲ. ಐದು ಬಾರಿ ಪಕ್ಷದಿಂದ ಶಾಸಕರಾಗಿದ್ದರು.‌ ಅವರು ಕೂಡ ಕಾಂಗ್ರೆಸ್ ಮೇಲೆ ನಕಾರಾತ್ಮಕ ಅಭಿಪ್ರಾಯ ಹೊಂದಿಲ್ಲ.

ಆದರೆ ಪ್ರಸ್ತುತ ಸಂದರ್ಭದಲ್ಲಿ ಅವರು ಎಚ್ಚರಿಕೆಯಿಂದ ಇರಬೇಕು. ಬಿಜೆಪಿಯವರ ಮಾತು ಕೇಳಿ ನಿರ್ಧಾರ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲ್ಲ.‌ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಅವರಿಗೆ ಎಂದಿಗೂ ಅನ್ಯಾಯ ಮಾಡಿಲ್ಲ.‌ ಮುಂದೆ ಕೂಡ ಗೌರವದಿಂದ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಅವರ ನೋವಿಗೆ ಪಕ್ಷ ಕಾರಣ ಅಲ್ಲ.‌ ಹಾಗಾಗಿ ಸಂಧಾನ ಮಾತುಕತೆಯ ಅಗತ್ಯ ಇಲ್ಲ. ವೈಯಕ್ತಿಕ ನೋವಿಗೆ ಕಾಂಗ್ರೆಸ್ ಬಿಡುವ ನಿರ್ಧಾರ ತೆಗೆದುಕೊಂಡರೆ ಕೆಟ್ಟದಾಗುತ್ತೆ. ಬಿಜೆಪಿ ಮಾತು ಕೇಳದೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಮೇ 23 ರಂದು ಲೋಕಸಭೆಯ ಫಲಿತಾಂಶ ಬಂದ ನಂತರ ಎಲ್ಲ ಸರಿ ಹೋಗುತ್ತದೆ. ಕೇಂದ್ರದಲ್ಲಿ ಯುಪಿಎ 3 ಅಧಿಕಾರಕ್ಕೆ ಬರುತ್ತದೆ. ರಾಜಕೀಯ ಬದಲಾವಣೆ ನಂತರ ರಾಜ್ಯದಲ್ಲಿ ಆಪರೆಷನ್ ಕಮಲ, ಕುದುರೆ ವ್ಯಾಪಾರ ಎಲ್ಲವೂ ನಿಲ್ಲುತ್ತದೆ. ಶಾಸಕರು ಪಕ್ಷ ಬಿಟ್ಟು ಹೋಗುವುದು, ಮತ್ತೆ ಬರುವುದು ಎಲ್ಲದಕ್ಕೂ ಬ್ರೆಕ್ ಬೀಳುತ್ತದೆ ಎಂದು ಹೇಳಿದರು.

ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲ ಜೆಡಿಎಸ್ ಮತ್ತು ಕಾಂಗ್ರೆಸ್ ಜೊತೆಯಾಗಿಯೇ ಹೋಗುತ್ತೇವೆ. ಮಾಜಿ ಪ್ರಧಾನಿ
ದೇವೇಗೌಡರ ಜೊತೆ ಇಂದು ನಾನು ಅಧಿಕರತವಾಗಿ ಮಾತನಾಡುತ್ತೇನೆ. ನಾವು ಮಾತನಾಡುವ ಮೊದಲೇ ದೇವೇಗೌಡರು ಜೆಡಿಎಸ್ ಉಪಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಚಿಂಚೋಳಿ ಕ್ಷೇತ್ರದಲ್ಲಿ ಉಮೇಶ್ ಜಾದವ್ ಪಕ್ಷಕ್ಕೆ, ಮತದಾರರಿಗೆ ದ ದ್ರೋಹ ಮಾಡಿದ್ದಾರೆ. ಲೋಕಸಭೆ ಚುನಸವಣೆಯಲ್ಲಿ ಸ್ಪರ್ಧಿಸಿರುವ ಅವರು ಸೋಲುತ್ತಾರೆ. ಚಿಂಚೋಳಿಯಲ್ಲೂ ಸೋಲುತ್ತಾರೆ. ಅನಂತರ ಕ್ಷೇತ್ರದಿಂದಲೇ ಜನ ಅವರನ್ನು ಹೊರ ಹಾಕುತ್ತಾರೆ ಎಂದು ಹೇಳಿದರು.

ಚಿಂಚೋಳಿ, ಕುಂದಗೋಳ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಜಿಲ್ಲಾ ಮುಖಂಡರ ಜೊತೆ ಸಭೆ ನಡೆಸಲಾಗಿದೆ. ಇದಕ್ಕೂ ಮೊದಲು ಧಾರವಾಡದಲ್ಲಿ ಮತ್ತು ಗುಲ್ಬರ್ಗದಲ್ಲಿ ಸಭೆಗಳು ನಡೆದಿವೆ ಎಂದರು.

ಹೈಕಮಾಂಡ್ ಜೊತೆ ಚರ್ಚಿಸಿ ನಾಳೆ ಅಭ್ಯರ್ಥಿಗಳ್ಯಾರು‌ ಎಂಬುದನ್ನು ತಿರ್ಮಾನ ಮಾಡುತ್ತೇವೆ. ಎರಡು ಕಡೆ ಕ್ಷೇತ್ರಗಳಲ್ಲೂ ಉತ್ಸಾಹ ಇದೆ. ಕಾಂಗ್ರೆಸ್ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಇಲ್ಲ. ಯಾರಿಗೆ ಟಿಕೆಟ್ ಕೊಟ್ಟರು ಗೆಲ್ಲಿಸುತ್ತೇವೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಗೆಲ್ಲಲಿಕ್ಕೆ ಅಗತ್ಯ ತಂತ್ರಗಾರಿಕೆ ರೂಪಿಸುತ್ತೇವೆ. ಗೆಲ್ಲುವವ ಅಭ್ಯರ್ಥಿಗಳಿಗೆ ಮತ್ತು ಕಾರ್ಯಕರ್ತರ ಅಭಿಪ್ರಾಯ ಕೇಳಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

Facebook Comments