ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ. 20- ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ಅವರು ಇಂದು ಬೆಳಗ್ಗೆ 3 ಗಂಟೆ ಸುಮಾರಿನಲ್ಲಿ ಪಾಂಡಿಚೇರಿಯಲ್ಲಿ ನಿಧನರಾಗಿದ್ದಾರೆ. ಮಧುಮೇಹದಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಕಳೆದ ವರ್ಷ ಕೊರೊನಾ ಸೋಂಕಿಗೂ ಒಳಗಾಗಿದ್ದ ಪ್ರದೀಪ್ ರಾಜ್ (46) ನಿಧನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

ತಮ್ಮ ಚಿತ್ರಗಳಲ್ಲಿ ಹಳ್ಳಿ ಗಾಡಿನ ಸೊಗಡನ್ನು ಹೆಚ್ಚಾಗಿ ಬಿಂಬಿಸುತ್ತಿದ್ದ ಪ್ರದೀಪ್ ರಾಜ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ದುನಿಯಾ ವಿಜಯ್ ಅಭಿನಯದ ರಜನಿಕಾಂತ ಚಿತ್ರಕ್ಕೆ ಕಥೆಗಾರನಾಗುವ ಮೂಲಕ ಆನಂತರ ಕಾವೇರಿ ನಗರ ಸೇರಿದಂತೆ ಹಲವು ಚಿತ್ರಗಳಿಗೆ ಕಥೆಯನ್ನು ಒದಗಿಸಿದ್ದಾರೆ.

ಕಥೆಗಾರನಾಗಿದ್ದ ಪ್ರದೀಪ್‍ರಾಜ್‍ಗೆ ನಿರ್ದೇಶಕನಾಗಿ ಸಕ್ಸಸ್ ಕೊಟ್ಟ ಚಿತ್ರವೆಂದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಓವಿಯಾ ಅಭಿನಯದ ಕಿರಾತಕ. ಮಂಡ್ಯ, ಮೈಸೂರು ಭಾಗದ ಮಾತಿನ ಶೈಲಿ ಹಾಗೂ ಸಂಪ್ರದಾಯವನ್ನಿಟ್ಟುಕೊಂಡು ತಯಾರಾದ ಈ ಚಿತ್ರ ಶತದಿನವನ್ನು ಪೂರೈಸುವ ಮೂಲಕ ಪ್ರದೀಪ್‍ರಾಜ್‍ರ ಲಕ್ ಕುದುರಿಸಿತು.

ಕಿರಾತಕ ನಂತರ ಪ್ರದೀಪ್ ರಾಜ್ ಅವರು ಕಿಚ್ಚ ಸುದೀಪ್ ಅಭಿನಯದ ಕಿಚ್ಚು, ನೀನಾಸಂ ಸತೀಶ್ ನಟನೆಯ ಅಂಜದ ಗಂಡು, ಗೋಲ್ಡನ್‍ಸ್ಟಾರ್ ಗಣೇಶ್ ಅಭಿನಯದ ಮಿಸ್ಟರ್ 420, ಜೆಕೆ ನಟನೆಯ ಬೆಂಗಳೂರು 5600023, ಗಿರ್‍ಗಿಟ್ಲೆ, ಚಿತ್ರಗಳನ್ನು ನಿರ್ದೇಶಿಸಿದ್ದು ಇವರು ಆ್ಯಕ್ಷನ್ ಕಟ್ ಹೇಳಿರುವ ಕಿರಾತಕ 2 ಚಿತ್ರವು ಬಿಡುಗಡೆಯಾಗಬೇಕಿದೆ. ಅಂಜದ ಗಂಡು ಸಿನಿಮಾವನ್ನು ನಿರ್ಮಿಸಿರುವ ಪ್ರದೀಪ್‍ರಾಜ್ ಅವರು ಕನ್ನಡದ ಮಿಸ್ಟರ್ 420, ಮಲಯಾಳಂನ ಓಟಾಕೊಲ್ಲಾಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Facebook Comments

Sri Raghav

Admin