ಪರಿಸರವಾದಿಯೋ..? ಸಮಾಜದ ವ್ಯಾಧಿಯೋ..?

ಈ ಸುದ್ದಿಯನ್ನು ಶೇರ್ ಮಾಡಿ

ಅದು 1943ರ ವರ್ಷ, ತಾಯಿ ಭಾರತಾಂಬೆಯನ್ನು ಸ್ವಾತಂತ್ರ್ಯಗೊಳಿಸಲು ಅದೆಷ್ಟೋ ರಾಷ್ಟ್ರಭಕ್ತರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ಬಲಿದಾನಗೈದಿದ್ದರು. ಆದರೆ, ಜರ್ಮನಿಯಲ್ಲಿ ಹಿಟ್ಲರ್ ತನ್ನ ಹುಚ್ಚು ಮನಸ್ಥಿತಿಯಲ್ಲಿ ಆರ್ಯನ್ನರಷ್ಟೇ ಶ್ರೇಷ್ಠವೆಂದು ಭಾವಿಸಿ 60 ಲಕ್ಷ ಯಹೂದಿಗಳ ಮಾರಣ ಹೋಮ ನಡೆಸಿಬಿಟ್ಟಿದ್ದ. ಜತೆಗೆ ಕೆಥೋಲಿಕ್ ಮತ್ತು ಕಮ್ಯೂನಿಸ್ಟರನ್ನು ಬರ್ಬರವಾಗಿ ಹತ್ಯೆ ಮಾಡಿಸಿದ.

1943ರಲ್ಲಿ ಮಾರ್ಟಿನ್ ಎಮಿಲ್ಟರ್ ಎಂಬ ಪಾದ್ರಿಯನ್ನು ಬಂಧಿಸಿ ಚಿತ್ರಹಿಂಸೆ ನೀಡಿ 1945ರಲ್ಲಿ ಹಿಟ್ಲರ್ ಆ ಪಾದ್ರಿಯನ್ನು ಬಿಡುಗಡೆಗೊಳಿಸಿದ್ದ. ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಬಂದ ಮಾರ್ಟಿನ್ ಎಮಿಲ್ಟರ್ ತಮ್ಮ ಪಾಡು ಏಕೆ ಹೀಗಾಯಿತು ಎಂದು ಸುಂದರವಾಗಿ ಒಂದು ಕವನ ಬರೆಯುತ್ತಾನೆ. ನಾಜಿಗಳು ಮೊದಲ ಯಹೂದಿಗಳನ್ನು ಹುಡುಕಿ ಬಂದರು. ಆಗ ನಾನು ಸುಮ್ಮನಿದ್ದೆ, ಏಕೆಂದರೆ ನಾನು ಯಹೂದಿಯಾಗಿರಲಿಲ್ಲ.

ನಂತರ ಕೆಥೋಲಿಕ್‍ರನ್ನು ಹುಡುಕಿ ಬಂದರು. ಆಗಲೂ ನಾನು ಸುಮ್ಮನಿದ್ದೆ. ಏಕೆಂದರೆ, ನಾನು ಕೆಥೋಲಿಕನಾಗಿರಲಿಲ್ಲ. ನಂತರ ಅವರು ಜಿಪ್ಸಿಗಳನ್ನು, ಮುಸ್ಲಿಮರನ್ನೆಲ್ಲ ಹುಡುಕಿಕೊಂಡು ಬಂದರು. ಆಗಲೂ ನಾನು ಸುಮ್ಮನಿದ್ದು. ಏಕೆಂದರೆ ನಾನು ಜಿಪ್ಸಿ, ಮುಸ್ಲಿಮನಾಗಿರಲಿಲ್ಲ. ನಂತರ ಅವರು ಟ್ರೇಡ್ ಯುನಿಷ್ಟರನ್ನು, ಕಮ್ಯುನಿಷ್ಟರನ್ನು ಹುಡುಕಿಕೊಂಡು ಬಂದರು. ಆಗಲೂ ನಾನು ಸುಮ್ಮನಿದ್ದೆ. ಏಕೆಂದರೆ ನಾನು ಕಮ್ಯುನಿಷ್ಟನಾಗಿರಲಿಲ್ಲ. ಕೊನೆಗೆ ಅವರು ನನ್ನನ್ನೆ ಹುಡುಕಿ ಬಂದರು. ಆಗ ನನ್ನ ಪರವಾಗಿ ಧ್ವನಿ ಎತ್ತಲು ಯಾರೂ ಇರಲಿಲ್ಲ.

ನರೇಂದ್ರ ಮೋದಿಯವರ ವಿರುದ್ಧ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತ ಹೋರಾಟಗಾರರನ್ನು ಅತ್ಯಂತ ವ್ಯವಸ್ಥಿತವಾಗಿ ಎತ್ತಿಕಟ್ಟಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಜನವರಿ 26ರಂದು ದಂಗೆ ಏಳಲು ಕೆಲವು ಅಂತಾರಾಷ್ಟ್ರೀಯ ವಿಚ್ಛಿದ್ರಕಾರಿ ಶಕ್ತಿಗಳು ಇದೇ ಕವನವನ್ನೇ ಬಳಸಿಕೊಂಡಿದ್ದಾರೆ ಎಂಬುದು ಗಮನಾರ್ಹವಾದ ಸಂಗತಿ.

ಎಂತಹ ವಿಪರ್ಯಾಸವೆಂದರೆ, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮರವರು ಓದಿದ್ದ ಮೌ0ಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಪದವಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಿಶಾ ರವಿ ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಕಾರ್ಯಕರ್ತೆಯಾಗಿ ಗುರುತಿಸಿಕೊಂಡು ಸಮಾನ ಮನಸ್ಕರ ಜೊತೆಗೂಡಿ ಫ್ರೈಡೇ ಪಾರ್ ಪೋರಂ ಎಂಬ ಎನ್‍ಜಿಒ ಸಂಸ್ಥೆಯನ್ನು ಹುಟ್ಟುಹಾಕಿ ದೇಶದ ಹಲವು ಕಡೆ ಸಕ್ರಿಯವಾಗಿ ಈ ಸಂಸ್ಥೆ ಪರಿಸರ ಸಂರಕ್ಷಣೆಯ ಕುರಿತು ಕೆಲಸ ಮಾಡುತ್ತಿರುತ್ತದೆ.

ಇದೇ ಸಂದರ್ಭದಲ್ಲಿ ಅದ್ಹೇಗೋ ಸ್ವೀಡನ್ ದೇಶದ ಪರಿಸರ ಕಾರ್ಯಕರ್ತೆ 18 ವರ್ಷದ ಗ್ರೇಟಾ ತನ್ಬರ್ಗ್ ಅವರ ಸಂಪರ್ಕ ಸಾಧಿಸಿದ ದಿಶಾ ರವಿ, ದೆಹಲಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟದಲ್ಲಿ ಆಸಕ್ತಿ ವಹಿಸಿ ಜನವರಿ 26ರ ಗಣ ರಾಜ್ಯೋತ್ಸವದಂದು ರೈತರ ಪ್ರತಿಭಟನೆಗೆ ಕರೆ ಕೊಟ್ಟಿದ್ದ ಗ್ರೇಟಾ ತನ್ಬರ್ಗ್ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಇದರು ಕುರಿತು ಹೆಚ್ಚು ಸುದ್ದಿ ಮತ್ತು ಪ್ರಚಾರ ಮಾಡಲು ಟೂಲ್ ಕಿಟ್(ಪ್ರಚಾರ ಸಾಮಗ್ರಿ)ಅನ್ನು ತಯಾರಿಸುವರು.

ಜತೆಗೆ ಒಂದು ವಾಟ್ಸಾಪ್ ಗ್ರೂಪ ರಚನೆ ಮಾಡಿ ಅಲ್ಲಿ ಗೌಪ್ಯವಾಗಿ ಜನವರಿ 26ರ ಪ್ರತಿಭಟನೆಯ ಕುರಿತು ಪ್ರೋ ಖಲಿಸ್ತಾನಿ ಫೋಯಟಿಕ್ ಜಸ್ಟಿಸ್ ಫೌಂಡೇಷನ್ ಮುಖ್ಯಸ್ಥರ ಜತೆ ಜೂಮ್ ಆ್ಯಪ್‍ನಲ್ಲಿ ಮಾತನಾಡಿ, ಹೋರಾಟದ ಬಗ್ಗೆ ಕೆಲವು ಕಾರ್ಯ ತಂತ್ರಗಳನ್ನು ಹೆಣೆದು ಅವುಗಳನ್ನು ವಾಟ್ಸಾಪ್ ಗ್ರೂಪ್‍ನಲ್ಲಿ ಹಂಚಿಕೊಳ್ಳುವರು.

ಆಮೇಲೆ ಪ್ರತಿಭಟನೆ ಯಶಸ್ವಿಯಾದ ನಂತರ ವಾಟ್ಸಾಪ್ ಗ್ರೂಪ್‍ಅನ್ನು ಡಿಲೀಟ್ ಮಾಡಿ ನನಗೇನು ಗೊತ್ತೆ ಇಲ್ಲ ಎಂಬಂತೆ ತನ್ನ ದೈನಂದಿನ ಚಟುವಟಿಕೆಯಲ್ಲಿ ದಿಶಾ ರವಿ ತೊಡಗಿಕೊಂಡರು. ಯಾವಾಗ ಗ್ರೇಟಾ ತನ್ಬರ್ಗ್ ಅವರು ಪ್ರತಿಭಟನೆಯನ್ನು ಬೆಂಬಲಿಸಿ ಮಾಡಿದ್ದ ಟ್ವಿಟರ್‍ಅನ್ನೇ ಪರಿಗಣಿಸಿ ದೆಹಲಿಯ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡರೋ ಆಗಲೇ ನೋಡಿ ದಿಶಾ ರವಿಯವರ ಕೈವಾಡವು ಬಟಾ ಬಯಲಾಗಿದ್ದು.

ಸರ್ಕಾರದ ವಿರುದ್ಧ ಅವಿಶ್ವಾಸ ಮೂಡಿಸುವುದು, ಸಮಾಜದಲ್ಲಿ ಶಾಂತಿ ಕದಡುವುದು, ಸಮುದಾಯದಲ್ಲಿ ದ್ವೇಷ ಮೂಡಿಸುವುದು, ಒಟ್ಟಾರೆ ಸೆಕ್ಷನ್ 124ಎ, ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ದಿನಾಂಕ 13, ಕಳೆದ ಶನಿವಾರ ಮಧ್ಯಾಹ್ನ ದೆಹಲಿಯಿಂದ ಬಂದ ಪೊಲೀಸರು ಆಕೆಯ ತಾಯಿಯ ಸಮ್ಮುಖದಲ್ಲಿ ದಿಶಾ ಅವರನ್ನು ಬಂಧಿಸಿ ದೆಹಲಿಯ ಪಾಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ಐದು ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ದಿಶಾ ರವಿ ಅವರನ್ನು ಪೊಲೀಸ್ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಈಗ ವಿಚಾರಣೆ ನಡೆಯುತ್ತಿದೆ. ಮತ್ತೊಂದು ಕಡೆ ವಿರೋಧ ಪಕ್ಷಗಳು ಮತ್ತು ಹೋರಾಟಗಾರರು ದಿಶಾ ಅವರ ಬಂಧನವನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಸಂದರ್ಭಗಳನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಬಳಸುವುದು ತೀರ ಸಹಜ. ಅದೇನೆ ಇರಲಿ, 22 ವರ್ಷದ ದಿಶಾ ರವಿ ವಿದ್ಯಾವಂತೆ, ಪ್ರಜ್ಞಾವಂತೆ. ಆದರೆ ವಿಚಾರವಂತೆಯಲ್ಲ ಎಂಬುದು ಈ ಪ್ರಕರಣದಲ್ಲಿ ಸಾಬೀತಾಗಿದೆ. 2015ರಲ್ಲಿ ರಾಹುಲ್ ಗಾಂಧಿಅವರು ಜಸ್ಟ್ ಆಸ್ಕಿಂಗ್ ಕಾರ್ಯಕ್ರಮಕ್ಕೆಂದು ಮೌ0ಟ್ ಕಾರ್ಮೆಲ್ ಕಾಲೇಜಿಗೆ ಭೇಟಿ ಕೊಟ್ಟಿರುತ್ತಾರೆ.

ಅಂದಿನಿಂದ ರಾಹುಲ್ ಗಾಂಧಿಯವರ ಪ್ರಭಾವಕ್ಕೆ ಒಳಗಾದ ದಿಶಾ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಮಾರು ಹೋಗಿ ಮೋದಿ ಮತ್ತು ಬಿಜೆಪಿ ಪಕ್ಷವನ್ನು ವಿರೋಧಿಸುತ್ತಿದ್ದಳು ಎಂಬುದು ಆಕೆಯ ಸಹಪಾಠಿಗಳಿಂದ ತಿಳಿದು ಬಂದಿದೆ. ಪರಿಸರ ಕಾರ್ಯಕರ್ತೆಯೆಂದು ಹೇಳಿಕೊಂಡು ದೇಶದ್ರೋಹದ ಚಟುವಟಿಕೆಯಲ್ಲಿ ಭಾಗವಹಿಸುವುದು ಅದೆಷ್ಟು ಸರಿ..! ಎಂದು ದೇಶದಾದ್ಯಂತ ರಾಷ್ಟ್ರಭಕ್ತರು ದಿಶಾ ಅವರನ್ನು ಖಂಡಿಸುವುದರ ಜತೆಗೆ ತಮ್ಮ ಇಡೀ ಬದುಕನ್ನೇ ಪರಿಸರ ಸಂರಕ್ಷಣೆಗಾಗಿ ಮುಡುಪಾಗಿಟ್ಟ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಸಾಲು ಮರದ ತಿಮ್ಮಕ್ಕ ಅವರನ್ನು ನೋಡಿ ಕಲಿಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೊಂದು ಕಡೆ ತಲೆ ಮರೆಸಿಕೊಂಡಿರುವ ದಿಶಾ ಸಹಚರರಾದ ನಿಕಿತ ಜಾಕೋಬ್ ಮತ್ತು ಶಂತನು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ಬೆಳವಣಿಗೆ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕು… ಆದರೆ, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಕೇಳಿ ಬರುತ್ತಿರುವ ಕಟ್ಟ ಕಡೆಯ ಪ್ರಶ್ನೆ ಎಂದರೆ ದಿಶಾ ರವಿ ಪರಿಸರ ವಾದಿಯೋ..! ಸಮಾಜದ ವ್ಯಾಧಿಯೋ..?
ಇದಕ್ಕೆ ಕಾಲವೇ ಉತ್ತರ ನೀಡಬೇಕು…..

# ಮಹಾಂತೇಶ್ ಬ್ರಹ್ಮ

Facebook Comments