ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ, ಅನರ್ಹ ಶಾಸಕರಿಗೆ ಮತ್ತೆ ನಿರಾಸೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ಅನರ್ಹ ಶಾಸಕರುಗಳ ಪ್ರಕರಣದ ವಿಚಾರಣೆಯಿಂದ ಸುಪ್ರೀಂಕೋರ್ಟ್ ಪೀಠದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಹಿಂದೆ ಸರಿದಿದ್ದರಿಂದಾಗಿ ವಿಚಾರಣೆ ಒಂದು ವಾರ ಕಾಲ ಮುಂದೂಡಿಕೆಯಾಗಿದೆ.

ಕಳೆದ 45 ದಿನಗಳ ಹಿಂದೆ ಅನರ್ಹಗೊಂಡಿರುವ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದಿಗೆ ಬಂದಿತು. ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ಪೀಠದಲ್ಲಿ ಕರ್ನಾಟಕದ ಧಾರವಾಡದವರಾದ ನ್ಯಾ.ಮೋಹನ್ ಶಾಂತನಗೌಡರ್ ಅವರಿದ್ದರು.

ಪ್ರಕರಣ ಕರ್ನಾಟಕದ್ದೇ ಆಗಿರುವುದರಿಂದ ತಾವು ಅದೇ ರಾಜ್ಯಕ್ಕೆ ಸೇರಿರುವುರಿಂದ ವಿಚಾರಣೆ ನಡೆಸುವುದು ಸೂಕ್ತವೆನಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ನ್ಯಾ.ಮೋಹನ್ ಶಾಂತನಗೌಡರು ಹಿಂದೆ ಸರಿದರು.

ಮೋಹನ್ ಶಾಂತನಗೌಡರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಂತೆ ಪೀಠದ ಮುಖ್ಯಸ್ಥರಾದ ಎಂ.ವಿ.ರಮಣ ಅವರು ಕರ್ನಾಟಕ ಮೂಲದ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನಡೆಸುವುದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ವಾದಿ ಮತ್ತು ಪ್ರತಿವಾದಿ ವಕೀಲರನ್ನು ಪ್ರಶ್ನಿಸಿದರು.

ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೋಹ್ಟಗಿ, ಕೆಪಿಸಿಸಿ ಪರ ವಕೀಲರಾದ ಕಪಿಲ್ ಸಿಬಾಲ್ ಅವರುಗಳು ತಮ್ಮ ಆಕ್ಷೇಪ ಇಲ್ಲ ಎಂದು ಹೇಳಿದರು. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ತಕ್ಷಣ ವಿಚಾರಣೆಯನ್ನು ಕೈಗೆತ್ತಿಕೊಳ್ಳಿ ಎಂದು ರೋಹ್ಟಗಿ ಮನವಿ ಮಾಡಿದರು. ಆದರೂ ಶಾಂತನಗೌಡ ಅವರು ಪ್ರಕರಣದ ವಿಚಾರಣೆಯಲ್ಲಿ ಮುಂದುವರೆಯಲು ನಿರಾಕರಿಸಿದ್ದರಿಂದ ಮುಂದಿನ ವಾರಕ್ಕೆ ಮುಂದೂಡಲ್ಪಟ್ಟಿತು.

ಸುಪ್ರೀಂಕೋರ್ಟ್‍ನ ವಿಚಾರಣಾ ಪೀಠ ಪುನಾರÀಚನೆಯಾಗಬೇಕು. ಮೋಹನ್ ಶಾಂತನಗೌಡರ ಬದಲಾಗಿ ಬೇರೆ ನ್ಯಾಯಮೂರ್ತಿಗಳನ್ನು ನೇಮಿಸಬೇಕು. ಹಾಗಾಗಿ ಕಾಲಾವಕಾಶ ಬೇಕಾಗಿರುವುದರಿಂದ ಸೆ.23ಕ್ಕೆ ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಸುಮಾರು 45 ದಿನಗಳಿಂದ ನೆನಗುದಿಗೆ ಬಿದ್ದಿದ್ದ ಪ್ರಕರಣ ಇಂದು ವಿಚಾರಣೆಗೆ ಬರುತ್ತಿದ್ದಂತ ಅನರ್ಹ ಶಾಸಕರಲ್ಲಿ ಒಂದಿಷ್ಟು ಆಶಾಭಾವನೆ ಮೂಡಿತ್ತು. ಇಂದಿನ ವಿಚಾರಣೆಯಲ್ಲಿ ಪ್ರಕರಣವನ್ನು ಹೈಕೋರ್ಟ್‍ಗೆ ವಾಪಸ್ ಕಳುಹಿಸಬಹುದು ಅಥವಾ ಸ್ಪೀಕರ್ ಅವರು ರಾಜೀನಾಮೆ ಪ್ರಕರಣವನ್ನು ಮರುವಿಚಾರಣೆ ನಡೆಸುವಂತೆ ಸೂಚಿಸಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ನ್ಯಾಯಮೂರ್ತಿಗಳೇ ಹಿಂದೆ ಸರಿದಿರುವುದರಿಂದ ಮತ್ತಷ್ಟು ವಿಳಂಬವಾದಂತಾಗಿದೆ.

Facebook Comments

Sri Raghav

Admin