ಹಲವು ಅನುಮಾನ ಮೂಡಿಸುತ್ತಿದೆ ಅನರ್ಹರ ‘ನಾವೇ ಅಭ್ಯರ್ಥಿಗಳು’ ಎಂಬ ಹೇಳಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ಉಪಚುನಾವಣೆಗಳಲ್ಲಿ ನಾವೇ ಅಭ್ಯರ್ಥಿಗಳು ಎಂದು ಅನರ್ಹ ಶಾಸಕರು ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಅನುಮಾನಗಳನ್ನು ಹುಟ್ಟು ಹಾಕಿವೆ. ಉಪ ಚುನಾವಣೆಗಳಿಗೆ ನಾಮ ಪತ್ರ ಸಲ್ಲಿಸುವ ಪ್ರಕ್ರಿಯೆಗೆ ಇನ್ನು 24 ದಿನಗಳು ಮಾತ್ರ ಬಾಕಿ  ಇದೆ. ಅತ್ತ ಸುಪ್ರೀಂ ಕೋರ್ಟ್‍ನ ವಿಚಾರಣೆ ಯಿಂದಾಗಿ ಚುನಾವಣೆ ನಡೆಯಲಿದೆಯೋ, ಇಲ್ಲವೋ, ಚುನಾವಣೆ ನಡೆದರೂ ಅನರ್ಹರ ಸ್ಪರ್ಧೆಗೆ ಅವಕಾಶ ಸಿಗುತ್ತದೋ, ಇಲ್ಲವೋ  ಎಂಬ ಗೊಂದಲಗಳು ಬಗೆಹರಿದಿಲ್ಲ.

ಆದರೂ ಅನರ್ಹ ಶಾಸಕರ ಪೈಕಿ ಹೊಸಕೋಟೆಯ ಎಂ.ಟಿ.ಬಿ. ನಾಗರಾಜ್, ಹುಣಸೂರಿನ ಎಚ್. ವಿಶ್ವನಾಥ್, ಗೋಕಾಕ್‍ನ ರಮೇಶ್ ಜಾರಕಿಹೊಳಿ, ರಾಣೆಬೆನ್ನೂರಿ ಆರ್. ಶಂಕರ್, ಚಿಕ್ಕಬಳ್ಳಾಪುರದ ಡಾ.ಸುಧಾಕರ್, ವಿಜಯನಗರದ ಆನಂದ್‍ಸಿಂಗ್ ಮತ್ತಿತರರು ಉಪ ಚುನಾವಣೆಯಲ್ಲಿ ನಾವೇ ಅಭ್ಯರ್ಥಿಗಳು ಎಂದು ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ.

ಸ್ಪೀಕರ್ ರಮೇಶ್‍ಕುಮಾರ್ ಅವರ ತೀರ್ಪಿನ ಪ್ರಕಾರ 17 ಮಂದಿ ಅನರ್ಹ ಶಾಸಕರು 16ನೇ ವಿಧಾನಸಭೆ ಅವಧಿ ಮುಗಿಯುವವರೆಗೂ ಸಚಿವ ಸ್ಥಾನ, ನಿಗಮ ಮಂಡಳಿ ಸೇರಿದಂತೆ ಯಾವುದೇ ಸಾಂವಿಧಾನಿಕ ಹುದ್ದೆ ಗಳನ್ನು ವಹಿಸಿಕೊಳ್ಳುವಂತಿಲ್ಲ ಮತ್ತು ಉಪ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಗಳಲ್ಲೂ ಸ್ಪರ್ಧಿಸುವಂತಿಲ್ಲ.

ಈ ತೀರ್ಪನ್ನು ಆಧಾರವಾಗಿಟ್ಟು ಕೊಂಡು ಅನರ್ಹರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂದು ಚುನಾವಣಾ ಆಯೋಗದ ರಾಜ್ಯದ ಮುಖ್ಯಾಧಿಕಾರಿಗಳು ಮೊದಲು ಹೇಳಿಕೆ
ನೀಡಿದ್ದರು.  ಅದರ ಮರು ದಿನ ಕೇಂದ್ರದ ಚುನಾವಣಾಧಿಕಾರಿಗಳು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮುಂದೆ ಸ್ವಪ್ರೇರಣೆಯಿಂದ ಹಾಜ ರಾಗಿ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯಂತರ ಇಲ್ಲ ಎಂದು ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

Facebook Comments