“ಅನರ್ಹ ಶಾಸಕ ಸುಧಾಕರ್‌ಗೆ ರಮೇಶ್‍ಕುಮಾರ್ ಬಗ್ಗೆ ಮಾತಾಡೋ ನೈತಿಕತೆ ಇಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಆ.5- ಕಾಂಗ್ರೆಸ್‍ನಲ್ಲಿ ಎಲ್ಲಾ ರೀತಿಯ ಅಧಿಕಾರಗಳನ್ನು ಪಡೆದು ರಾಜೀನಾಮೆ ನೀಡಿ ಹೋಗಿರುವ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್‍ಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜಿಲ್ಲೆಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಮಾಜಿ ಸಚಿವರಾದ ವಿ.ಮುನಿಯಪ್ಪ ಮತ್ತು ಎನ್.ಎಚ್.ಶಿವಶಂಕರರೆಡ್ಡಿ, ಸುಧಾಕರ್ ಅವರಿಗೆ ನೈತಿಕತೆ ಇದ್ದರೆ ಮೊದಲು ಕಾಂಗ್ರೆಸ್ ಸರ್ಕಾರ ನೇಮಿಸಿದ್ದ ವಾಯುಮಾಲಿನ್ಯ ನಿಯಂತ್ರಣಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಉಪಚುನಾವಣೆ ಎದುರಾದರೆ ಎಲ್ಲಾ ಮುಖಂಡರು ಸಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಸುಧಾಕರ್ ಅವರನ್ನು ಅನುಸರಿಸಿ ಯಾವುದೇ ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೋಗಬಾರದು. ಒಂದು ವೇಳೆ ಹೋಗುವವರಿದ್ದರೆ ಹೋಗಲಿ ಎಂದು ಹೇಳಿದರು. ಪಕ್ಷದ ಮುಖಂಡ ಜಿ.ಎಚ್.ನಾಗರಾಜ್ ಮಾತನಾಡಿ, ಸುಧಾಕರ್ ಅವರು ಪಕ್ಷದ್ರೋಹ, ಪಿತೃದ್ರೋಹ, ಸಮಾಜ ದ್ರೋಹ ಮಾಡಿದ್ದಾರೆ.

ಪಕ್ಷವೇ ನಮಗೆ ತಂದೆ-ತಾಯಿ ಎಂದು ಹೇಳುತ್ತಿದ್ದವರು. ಇಂದು ದ್ರೋಹವೆಸಗಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆ.ವಿ.ನವೀನ್‍ಕಿರಣ್ ಮಾತನಾಡಿ, ಕಳೆದ ಬಾರಿ ಸುಧಾಕರ್ ಅವರು ಹಣ ಹಂಚಿಕೆ ಮಾಡಿ ಗೆದಿದ್ದರು.

ಹಣ ಪಡೆದು ಮತ ಹಾಕಿದ್ದರೆ ಈ ರೀತಿಯ ಪರಿಸ್ಥಿತಿಯ ಎದುರಿಸಬೇಕಾಗುತ್ತದೆ. ಹಾಗಾಗಿ ಜನ ಆಮೀಷಕ್ಕೆ ಬಲಿಯಾಗದೆ ಒಳ್ಳೆಯ ನಾಯಕರನ್ನ ಗೆಲ್ಲಿಸಬೇಕೆಂದು ಸಲಹೆ ನೀಡಿದರು.

Facebook Comments

Sri Raghav

Admin