ಮುನಿಸಿಕೊಂಡ ಅನರ್ಹ ಶಾಸಕರಿಗೆ ಡಿಸಿಎಂಗಳಿಂದ ಮುಲಾಮ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.22- ಅನರ್ಹಗೊಂಡ ಶಾಸಕರ ಜತೆ ಉಪಮುಖ್ಯಮಂತ್ರಿಗಳಾದ ಅಶ್ವತ್ಥ ನಾರಾಯಣ ಹಾಗೂ ಲಕ್ಷ್ಮಣ ಸವದಿ ಮಾತುಕತೆ ನಡೆಸಿ ಸಮಾಧಾನ ಪಡಿಸುವ ಪ್ರಯತ್ನ ನಡೆಸಿದ್ದಾರೆ.  ನವದೆಹಲಿಯ ಐಟಿಸಿ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿರುವ ಅನರ್ಹರಾದ ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಗೋಪಾಲಯ್ಯ ಸೇರಿದಂತೆ ಮತ್ತಿತರರ ಜತೆ ಬೆಳಗ್ಗೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಹಾಗೂ ಲಕ್ಷ್ಮಣ ಸವದಿ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರ ಸೂಚನೆ ಮೇರೆಗೆ ಹೊಟೇಲ್‍ಗೆ ಬಂದಿದ್ದ ಇಬ್ಬರು ಡಿಸಿಎಂಗಳು ಮುನಿಸಿಕೊಂಡಿರುವ ಅನರ್ಹರನ್ನು ಸಮಾಧಾನಪಡಿಸಲು ಮುಂದಾದರು.
ನ್ಯಾಯಾಲಯದಲ್ಲಿ ಖಂಡಿತವಾಗಿಯೂ ನ್ಯಾಯ ಸಿಕ್ಕೇ ಸಿಗುತ್ತದೆ.

ನಿಮ್ಮ ಪರವಾಗಿ ಸುಪ್ರೀಂಕೋರ್ಟ್‍ನಲ್ಲಿ ನುರಿತ ಕಾನೂನು ತಜ್ಞರನ್ನೇ ನೇಮಕ ಮಾಡಲಾಗಿದೆ. ನಾಳೆ ಅರ್ಜಿ ವಿಚಾರಣೆ ನಡೆಯಲಿದ್ದು, ಆತಂಕ ಪಡಬಾರದು ಎಂದು ಅನರ್ಹರನ್ನು ಮನವೊಲಿಸಿದ್ದಾರೆ. ಈಗಾಗಲೇ ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಷಾ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರರು ಸುಪ್ರೀಂಕೋರ್ಟ್ ಹಿರಿಯ ವಕೀಲರಾದ ಮುಕುಲ್ ರೊಹಟಗಿ ಜತೆ ಮಾತುಕತೆ ನಡೆಸಿದ್ದಾರೆ.

ನಿಮ್ಮ ಪರವಾಗಿ ನಾಳೆ ನ್ಯಾಯಾಲಯದಲ್ಲೂ ವಾದ ಮಂಡಿಸುವರು. ಗಾಳಿ ಸುದ್ದಿಗೆ ತಲೆ ಕೆಡಿಸಿಕೊಳ್ಳದಂತೆ ಮನವಿ ಮಾಡಿದ್ದಾರೆ. ಎಂತಹ ಸಂದರ್ಭದಲ್ಲೂ ನಿಮ್ಮನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಕೊನೆ ಕ್ಷಣದವರೆಗೂ ಕಾನೂನು ಹೋರಾಟ ಮಾಡಲಾಗುವುದು. ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ನಾಳೆ ನಡೆಸಲಿದೆ. ನಿಮಗೆ ಖಂಡಿತವಾಗಿಯೂ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯನ್ನು ಅನರ್ಹರಿಗೆ ನೀಡಿದ್ದಾರೆಂದು ತಿಳಿದುಬಂದಿದೆ.

Facebook Comments