ಬೈಎಲೆಕ್ಷನ್ ‘ಅಗ್ನಿ ಪರೀಕ್ಷೆ’ ಗೆಲ್ಲುವವರೆಗೂ ಅನರ್ಹ ಶಾಸಕರಿಗಿಲ್ಲ ಗೂಟದ ಕಾರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.13-ನಿಕಟಪೂರ್ವ ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅವರು ತೆಗೆದುಕೊಂಡ ಅನರ್ಹತೆ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವ ಕಾರಣ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಗೆದ್ದೇ ಮಂತ್ರಿ ಸ್ಥಾನವನ್ನು ಅಲಂಕರಿಸಬೇಕು.

ಒಂದು ವೇಳೆ ಸ್ಪೀಕರ್ ಆದೇಶವನ್ನು ಅನೂರ್ಜಿತಗೊಳಿಸಿದ್ದರೆ ಅನರ್ಹಗೊಂಡ ಶಾಸಕರು ಶೀಘ್ರದಲ್ಲೇ ಮಂತ್ರಿ ಸ್ಥಾನ ಅಲಂಕರಿಸುತ್ತಿದ್ದರು. ಆದರೆ ಇದೀಗ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನ್ಯಾಯಾಲಯ ಅವಕಾಶ ನೀಡಿರುವುದರಿಂದ ಗೆದ್ದ ನಂತರವೇ ಲಾಭದಾಯಕ ಹುದ್ದೆ ಅಲಂಕರಿಸಬಹುದು.

ಏಕೆಂದರೆ ಸಂವಿಧಾನದ ಪರಿಚ್ಛೇಧ 102(1)ಎ ಪ್ರಕಾರ ಸದಸ್ಯತ್ವದಿಂದ ಅನರ್ಹಗೊಂಡವರು ಯಾವುದೇ ರೀತಿಯ ಲಾಭದಾಯಕ ಹುದ್ದೆಯನ್ನು ಅಲಂಕರಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
ಇದೀಗ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿರುವ ಕಾರಣ 17 ಮಂದಿ ಶಾಸಕರು ಅನರ್ಹಗೊಂಡಿದ್ದಾರೆ. ಆದರೆ ಸಮಾಧಾನಕರ ಅಂಶವೆಂದರೆ ಅವರು ಉಪಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ.

ಹೀಗಾಗಿ ಉಪಸಮರದಲ್ಲಿ ಸ್ಪರ್ಧಿಸಿ ಮರು ಆಯ್ಕೆಯಾದ ನಂತರವೇ ಮಂತ್ರಿಯಾಗಬೇಕಾಗುತ್ತದೆ.ಈ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದವರಿಗೆ ಮಂತ್ರಿ ಸ್ಥಾನ ನೀಡುವ ಆಶ್ವಾಸನೆ ನೀಡಲಾಗಿತ್ತು. ವಿಧಾನಸಭೆ ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಿದ್ದರೆ ಬಹುತೇಕರು ಮಂತ್ರಿಯಾಗುವ ಅವಕಾಶವಿರುತ್ತಿತ್ತು. ಆದರೆ ಅವರನ್ನು ಸದಸ್ಯತ್ವದಿಂದಲ್ಲೇ ಅನರ್ಹಗೊಳಿಸಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿರ್ಬಂಧ ಹಾಕಲಾಗಿತ್ತು.

ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಅನರ್ಹರು ಈಗಾಗಲೇ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ರಾಜ್ಯ ಸರ್ಕಾರವು ಅನರ್ಹ ಕ್ಷೇತ್ರಗಳಿಗೆ ಭರಪೂರ ಅನುದಾನವನ್ನು ಹರಿಸುತ್ತಿದೆ.

ಬಿಜೆಪಿ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಬೇಕಾದರೆ ಇನ್ನು 7 ಸ್ಥಾನಗಳನ್ನು ಗೆಲ್ಲಬೇಕು. ಹೀಗಾಗಿ 15 ಕ್ಷೇತ್ರಗಳ ಪೈಕಿ ಬಿಜೆಪಿ ಕನಿಷ್ಟ 12ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಗುರಿ ಇಟ್ಟುಕೊಂಡಿದೆ. ಹೀಗಾಗಿಯೇ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅನರ್ಹರ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರಕ್ಕೂ ಧುಮುಕಿದ್ದಾರೆ.

Facebook Comments

Sri Raghav

Admin