ನಾಳೆ ಅಥವಾ ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಅನರ್ಹ ಶಾಸಕರು..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.13-ಕಾಂಗ್ರೆಸ್ -ಜೆಡಿಎಸ್‍ನಿಂದ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಶಾಸಕರು ನಾಳೆ ಅಥವಾ ಶುಕ್ರವಾರ ಬಿಜೆಪಿಗೆ ವಿದ್ಯುಕ್ತವಾಗಿ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡ ಜೊತೆ ದೂರವಾಣಿ ಮೂಲಕ ಅನರ್ಹರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ರಾಜ್ಯದಲ್ಲಿ ಸ್ಥಿರ ಮತ್ತು ಸುಭದ್ರ ಸರ್ಕಾರ ಅಗತ್ಯವಿರುವ ಕಾರಣ ಡಿ.5ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಮೊದಲೇ ವಾಗ್ದಾನ ಮಾಡಿದಂತೆ ಅನರ್ಹರಿಗೆ ಟಿಕೆಟ್ ನೀಡಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಹೀಗಾಗಿ 17 ಮಂದಿ ಅನರ್ಹರು ನಾಳೆ ಅಥವಾ ಶುಕ್ರವಾರ ವಿದ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದು ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ.

ಶುಕ್ರವಾರವೇ ಎಲ್ಲರಿಗೂ ಬಿ ಫಾರಂ ಸಿಗಲಿದ್ದು, ಸಾಧ್ಯವಾದರೆ ಅಂದೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇವರೆಲ್ಲರೂ ದೆಹಲಿ ಇಲ್ಲವೇ ಬೆಂಗಳೂರಿನ ಕಚೇರಿಯಲ್ಲೇ ಪಕ್ಷಕ್ಕೆ ಸೇರ್ಪಡೆಯಾಗುವರೋ ಎಂಬುದು ಖಚಿತಪಟ್ಟಿಲ್ಲ. ಮೂಲಗಳ ಪ್ರಕಾರ ಈಗಾಗಲೇ ಅನರ್ಹರ ಜೊತೆ ಸಿಎಂ ಯಡಿಯೂರಪ್ಪನವರು ಕೂಡ ದೂರವಾಣಿ ಮೂಲಕ ಮಾತನಾಡಿ ಟಿಕೆಟ್ ನೀಡುವ ಭರವಸೆಯನ್ನು ಖಚಿತಪಡಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿರುವುದರಿಂದ ಶುಕ್ರವಾರ ಶುಭದಿನವಾದ ಹಿನ್ನೆಲೆಯಲ್ಲಿ ಅಂದೇ ನಾಮಪತ್ರ ಸಲ್ಲಿಸಲು ಅನರ್ಹರು ಸಮಯವನ್ನು ನಿಗದಿಪಡಿಸಿಕೊಂಡಿದ್ದಾರೆ. ಅನರ್ಹ ಶಾಸಕರಾದ ಮುನಿರತ್ನ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರ ಕ್ಷೇತ್ರಗಳ ಅರ್ಜಿ ವಿಚಾರಣೆ ಹೈಕೋರ್ಟ್‍ನಲ್ಲಿ ಬಾಕಿ ಇರುವ ಕಾರಣ ಉಪಚುನಾವಣೆ ನಡೆಯುತ್ತಿಲ್ಲ.  ಉಳಿದಂತೆ 15 ಕ್ಷೇತ್ರಗಳಿಗೆ ಡಿ.5ರಂದು ಚುನಾವಣೆ ನಡೆಯಲಿದ್ದು, ಮುಂದಿನ ವಾರದಿಂದ ಪ್ರಚಾರ ಆರಂಭವಾಗಲಿದೆ.

Facebook Comments

Sri Raghav

Admin