ಉಪಚುನಾವಣೆಯಲ್ಲಿ ಸೋತ ವಿಶ್ವನಾಥ್, ಎಂಟಿಬಿ ಕಥೆ ಏನು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.9- ಉಪ ಚುನಾವಣೆ ನಡೆದು ಕೆಲವರು ಗೆದ್ದು, ಇನ್ನು ಕೆಲವರು ಸೋಲು ಕಾಣುವ ಮೂಲಕ ತಮ್ಮ ರಾಜಕೀಯ ಭವಿಷ್ಯದಲ್ಲಿ ಸ್ಪಷ್ಟತೆಯನ್ನು ಪಡೆದುಕೊಂಡಿದ್ದಾರೆ. ಆದರೆ, ರಾಜರಾಜೇಶ್ವರಿ ನಗರದ ಮುನಿರತ್ನ ಹಾಗೂ ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್ ಮಾತ್ರ ಈಗಲೂ ಅತಂತ್ರ ಸ್ಥಿತಿಯಲ್ಲೇ ಇದ್ದಾರೆ.  ಹದಿನೈದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಸರ್ಕಾರದ ಬಹುಮತಕ್ಕೆ ಅಗತ್ಯವಿದ್ದ ಕ್ಷೇತ್ರಗಳಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದೆ.

ಗೆದ್ದಿರುವ ಮಹಾಲಕ್ಷ್ಮಿ ಲೇಔಟ್‍ನ ಕೆ.ಗೋಪಾಲಯ್ಯ, ಕೆ.ಆರ್.ಪುರಂ ಬೈರತಿ ಬಸವರಾಜು, ಚಿಕ್ಕಬಳ್ಳಾಪುರದ ಸುಧಾಕರ್, ಕೆ.ಆರ್.ಪೇಟೆಯ ನಾರಾಯಣಗೌಡ, ಹಿರೇಕೆರೂರಿನ ಬಿ.ಸಿ.ಪಾಟೀಲ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಗೋಕಾಕ್‍ನ ರಮೇಶ್‍ಜಾರಕಿಹೊಳಿ, ಅಥಣಿಯ ಮಹೇಶ್‍ಕುಮಟಳ್ಳಿ, ಕಾಗವಾಡದ ಶ್ರೀಮಂತ್ ಪಾಟೀಲ್, ಯಶವಂತಪುರದ ಎಸ್.ಟಿ.ಸೋಮಶೇಖರ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.

ಸೋಲು ಕಂಡಿರುವ ಹೊಸಕೋಟೆಯ ಎಂ.ಟಿ.ಬಿ.ನಾಗರಾಜ್, ಹುಣಸೂರಿನ ಎಚ್.ವಿಶ್ವನಾಥ್ ಅವರ ರಾಜಕೀಯ ಭವಿಷ್ಯಗಳ ಬಗ್ಗೆ ಗೊಂದಲಗಳಿವೆ. ಮೂಲಗಳ ಪ್ರಕಾರ ಈ ಇಬ್ಬರಲ್ಲಿ ಎಂ.ಟಿ.ಬಿ.ನಾಗರಾಜ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿಸುವ ಸಾಧ್ಯತೆಗಳಿವೆ. ವಿಶ್ವನಾಥ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ.

ನಿಮ್ಮನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಭರವಸೆ ನೀಡಿದ್ದರು. ಆದರೆ, ವಿಶ್ವನಾಥ್ ತಾವು ಜನರಿಂದಲೇ ಮತ್ತೆ ಆಯ್ಕೆಯಾಗಿ ಬರುವುದಾಗಿ ಹಠ ಹಿಡಿದು ಸ್ಪರ್ಧೆ ಮಾಡಿದ್ದರು. ವಿಶ್ವನಾಥ್ ಸ್ಪರ್ಧಿಸಿದ್ದ ಹುಣಸೂರಿ ಚುನಾವಣೆಯನ್ನು ನಿಭಾಯಿಸಲು ಬಿಜೆಪಿ ಸಾಕಷ್ಟು ಶ್ರಮ ಹಾಕಿತ್ತು. ಇನ್ನು ರಾಣೆಬೆನ್ನೂರಿನ ಶಾಸಕರಾಗಿದ್ದ ಆರ್.ಶಂಕರ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿತ್ತಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿರಲಿಲ್ಲ.

ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿಸುವ ವಾಗ್ದಾನವನ್ನು ಯಡಿಯೂರಪ್ಪ ಮಾಡಿದ್ದಾರೆ. ಹೀಗಾಗಿ ಶಂಕರ್ ಅವರ ರಾಜಕೀಯ ಭವಿಷ್ಯ ಕೂಡ ಒಂದು ಹಂತಕ್ಕೆ ಸರಿಹೋದಂತಾಗಿದೆ. ಶಿವಾಜಿನಗರದ ಆರ್.ರೋಷನ್‍ಬೇಗ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ. ಬಿಜೆಪಿ ಅಭ್ಯರ್ಥಿಯನ್ನು ಶಿವಾಜಿನಗರದಲ್ಲಿ ಗೆಲ್ಲಿಸಿಕೊಂಡು ಬಂದರೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುವ ಭರವಸೆಯನ್ನು ನೀಡಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ರೋಷನ್ ಬೇಗ್ ಸಾಕಷ್ಟು ಶ್ರಮ ಹಾಕಿದ್ದರು. ಆದರೆ, ಅದು ಫಲ ನೀಡಲಿಲ್ಲ. ಕ್ಷೇತ್ರದಲ್ಲಿ ರೋಷನ್ ಬೇಗ್ ಅವರ ಪ್ರತಿರೋಧದ ನಡುವೆ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದಾರೆ.

ಈ ಮೂಲಕ ಕಾಂಗ್ರೆಸ್‍ನಲ್ಲಿ ರೋಷನ್ ಬೇಗ್ ಅವರ ಮರುಪ್ರವೇಶಕ್ಕೆ ಇದ್ದ ಅವಕಾಶಗಳು ಕಡಿಮೆಯಾಗಿವೆ. ಬಿಜೆಪಿ ಈಗ ರೋಷನ್ ಬೇಗ್ ಅವರ ಕೈ ಹಿಡಿಯಲಿದೆಯೋ ಇಲ್ಲವೋ ಎಂಬ ಆತಂಕ ಬೆಂಬಲಿಗರನ್ನು ಕಾಡುತ್ತಿದೆ.ಇವರೆಲ್ಲರದು ಒಂದು ರೀತಿಯಾದರೆ ಮುನಿರತ್ನ ಹಾಗೂ ಪ್ರತಾಪ್‍ಗೌಡ ಪಾಟೀಲ್ ಅವರ ರೀತಿಯೇ ಬೇರೆಯಾಗಿದೆ. ಈ ಇಬ್ಬರು ಪ್ರತಿನಿಧಿಸುವ ಕ್ಷೇತ್ರಗಳ ಚುನಾವಣೆಗೆ ಸಂಬಂಧಪಟ್ಟಂತ ತಕರಾರು ಅರ್ಜಿ ಹೈಕೋರ್ಟ್‍ನ ವಿಚಾರಣೆಯಲ್ಲಿದೆ.

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಅನರ್ಹರಾಗಿರುವ 17 ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿ ಮರು ಆಯ್ಕೆಯಾದ ನಂತರ ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬಹುದು. ಉಪ ಚುನಾವಣೆಯಲ್ಲಿ 11 ಮಂದಿ ಮರು ಆಯ್ಕೆಯಾಗಿದ್ದಾರೆ. ಇಬ್ಬರು ಸೋಲು ಕಂಡಿದ್ದಾರೆ. ಉಳಿದಿಬ್ಬರು ಸ್ಪರ್ಧೆ ಮಾಡಿರಲಿಲ್ಲ ಹಾಗೂ ಮುನಿರತ್ನ ಮತ್ತು  ಪ್ರತಾಪ್‍ಗೌಡ ಪಾಟೀಲ್ ಕ್ಷೇತ್ರಗಳಿಗೆ ಚುನಾವಣೆಯೇ ನಡೆದಿರಲಿಲ್ಲ. ಗೆದ್ದವರನ್ನು ಹೊರತುಪಡಿಸಿ ಉಳಿದವರ ರಾಜಕೀಯ ಭವಿಷ್ಯ ಏನು ಎಂಬ ಗೊಂದಲಗಳು ಕಾಡಲಾರಂಭಿಸಿವೆ.

Facebook Comments