ಆರ್.ಆರ್.ನಗರದಲ್ಲಿ ಡಿ.ಕೆ.ರವಿ ಪತ್ನಿ ಕಣಕ್ಕಿಳಿಯುವುದು ಫಿಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.4- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ದಕ್ಷ ಐಎಎಸ್ ಅಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರ ಪತ್ನಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮುನಿರತ್ನ ಅವರನ್ನು ಸೋಲಿಸಲು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಸೂಕ್ತ ಎಂದು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಹಾಗಾಗಿ ಇಂದು ಕುಸುಮಾ ಅವರು ಕಾಂಗ್ರೆಸ್ ಕಚೇರಿಗೆ ಬಂದು ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ.

ಕುಸುಮಾ ಅವರ ತಂದೆ ಹನುಮಂತರಾಯಪ್ಪ ಬಹಳ ವರ್ಷ ಕಾಂಗ್ರೆಸ್‍ನಲ್ಲಿದ್ದವರು. ನಗರಸಭೆ ಅಧ್ಯಕ್ಷರಾಗಿ, ನೈಸ್ ಪ್ರಾಕಾರದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಚುನಾವಣೆಯಲ್ಲಿ ಸ್ರ್ಪಸಲು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿದ್ದರು.

ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಹನುಮಂತರಾಯಪ್ಪ ಅವರೇ ಅಭ್ಯರ್ಥಿಯಾಗಲು ಬಯಸಿದ್ದರು. ಆದರೆ, ಕಾಂಗ್ರೆಸ್ ನಾಯಕರ ಸಲಹೆ ಮೇರೆಗೆ ಕುಸುಮಾ ಅವರನ್ನು ಕಣಕ್ಕಿಸುತ್ತಿದ್ದಾರೆ. ಈ ಕುರಿತಂತೆ ಈಗಾಗಲೇ ಹನುಮಂತರಾಯಪ್ಪ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ಕುಸುಮಾ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಅವರ ಸೂಚನೆ ಮೇರೆಗೆ ಇಂದು ಕುಸುಮಾ ಅವರು ಕೆಪಿಸಿಸಿ ಕಚೇರಿಗೆ ಬಂದು ಕಾಂಗ್ರೆಸ್ ಸದಸ್ಯತ್ವ ಪಡೆದುಕೊಂಡಿದ್ದಾರೆ.

ಇತರ ಆಕಾಂಕ್ಷಿಗಳು: ರಾಜರಾಜೇಶ್ವರಿನಗರಕ್ಕೆ ಈ ಹಿಂದೆ ಸ್ಪರ್ಧೆ ಮಾಡಿದ್ದ ಪಿ.ಎನ್.ಕೃಷ್ಣಮೂರ್ತಿ, ಮಾಜಿ ಸಚಿವ ಎಂ.ಆರ್.ಸೀತಾರಂ ಅವರ ಪುತ್ರ ಹಾಗೂ ಅಖಿಲ ಭಾರತ ಯುವ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಮುಖ್ಯಸ್ಥ ರಕ್ಷಾರಾಮಯ್ಯ, ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರ ಪುತ್ರ ವೆಂಕಟೇಶ್ ಬಾಬು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಮಾಗಡಿ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ ಅವರ ಹೆಸರು ಕೇಳಿ ಬಂದಿತ್ತಾದರೂ ಕೊನೆ ಕ್ಷಣದಲ್ಲಿ ಅವರು ಸ್ವಕ್ಷೇತ್ರ ಬಿಟ್ಟು ಬರಲು ಹಿಂದೇಟು ಹಾಕಿದ್ದಾರೆ.

# ಸಂಜೆ ಸಭೆ:
ರಾಜ ರಾಜೇಶ್ವರಿನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ರಚಿಸಲಾಗಿರುವ ಸಮಿತಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸಂಜೆ ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ನೀಡಿದೆ.

ಟಿಕೆಟ್ ಆಕಾಂಕ್ಷಿಗಳ ಸಾಮಥ್ರ್ಯ, ಜನಪ್ರಿಯತೆ, ವಿದ್ಯಾಭ್ಯಾಸ, ಸಂಘಟನಾತ್ಮಕ ಹಿನ್ನೆಲೆ ಸೇರಿದಂತೆ ವಿವಿಧ ದೃಷ್ಟಿಕೋನಗಳಿಂದ ಪರಿಶೀಲನೆ ನಡೆಸಿ ವರದಿ ನೀಡಲಿದೆ. ಸಂಜೆಯೇ ಕಾಂಗ್ರೆಸ್‍ನ ಹಿರಿಯ ನಾಯಕರು ಸಭೆ ನಡೆಸಿ ಸಂಭವನೀಯ ಅಭ್ಯರ್ಥಿಯ ಹೆಸರನ್ನು ಹೈಕಮಾಂಡ್‍ಗೆ ರವಾನಿಸುವ ಸಾಧ್ಯತೆ ಇದೆ.

Facebook Comments

Sri Raghav

Admin