ಬ್ಲಾಕ್‍ಮೇಲ್ ಬಿಜೆಪಿ ಎಂದು ಕರೆಯುವುದು ಸೂಕ್ತ : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.14- ಸಚಿವ ಸ್ಥಾನಕ್ಕಾಗಿ ಹಣ ನೀಡಲಾಗಿದೆ. ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿಯ ಶಾಸಕರು, ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದನ್ನು ಆಧರಿಸಿ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ, ಸಿಬಿಐ, ಲೋಕಾಯುಕ್ತ ಹಾಗೂ ಇತರ ಸಂಸ್ಥೆಗಳು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ಇದೆ ಎಂದು ಕೆಲವರು ಮುಖ್ಯಮಂತ್ರಿಯವರನ್ನು ಬ್ಲಾಕ್‍ಮೇಲ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಹಾಗಾಗಿ ಬ್ಲಾಕ್‍ಮೇಲ್ ಬಿಜೆಪಿ ಎಂದು ಕರೆಯುವುದು ಸೂಕ್ತ. ಯಡಿಯೂರಪ್ಪ ಅವರು ಯಾರನ್ನಾದರೂ ಸಂಪುಟಕ್ಕೆ ತೆಗೆದುಕೊಳ್ಳಲಿ ಬಿಡಲಿ ಅದಕ್ಕೂ ನನಗೂ ಸಂಬಂಧವಿಲ್ಲ. ಆದರೆ, ಬಿಜೆಪಿಯ ಜವಾಬ್ದಾರಿಯುತ ಶಾಸಕರೇ ಸಂಪುಟ ವಿಸ್ತರಣೆಯಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಹೇಳುತ್ತಿದ್ದಾರೆ.

ಇದನ್ನು ತನಿಖೆ ನಡೆಸಬೇಕು. ಸ್ವಯತ್ತ ಸಂಸ್ಥೆಗಳು ಸ್ವಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು. ಜತೆಗೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು. ಸಿಡಿಯಲ್ಲಿ ಯಾವೆಲ್ಲಾ ಅಂಶಗಳಿವೆ. ಅದನ್ನು ಇಟ್ಟುಕೊಂಡು ಯಾರೆಲ್ಲ ಬ್ಲಾಕ್‍ಮೇಲ್ ಮಾಡಿದ್ದಾರೆ ಎಂಬ ಸಮಗ್ರ ತನಿಖೆ ಅಗತ್ಯವಿದೆ. ಈಶ್ವರಪ್ಪ ಅವರ ಆಪ್ತ ಸಹಾಯಕನನ್ನು ಯಾವ ಕಾರಣಕ್ಕಾಗಿ ಬೆದರಿಸಲಾಯಿತು ಎಂಬುದನ್ನು ಜನ ತಿಳಿದುಕೊಂಡಿದ್ದಾರೆ. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಕೇಳಿಬಂದ ಆರೋಪಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊರಬೇಕೆಂದು ಒತ್ತಾಯಿಸಿದರು.

ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅದು ಮತ್ತೆ 7 ಜನ್ಮ ಹುಟ್ಟಿಬಂದರೂ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರಿಂದ ಸಾಧ್ಯವಿಲ್ಲ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ ಎಂದು ಹೇಳಿದರು.

ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಕಾಂಗ್ರೆಸ್ ಜ.20ರಂದು ಬೆಂಗಳೂರಿನಲ್ಲಿ ರಾಜಭವನ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಂದು ಬೆಂಗಳೂರಿನ ಪ್ರಿಂಡಪಾರ್ಕ್ ಮತ್ತು ರೈಲ್ವೆ ನಿಲ್ದಾಣದಿಂದ ನಡೆಯಲಿದೆ. ಅಂದು ರಾಜಭವನಕ್ಕೆ ಮುತ್ತಿಗೆ ಹಾಕಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ, ಪೆಟ್ರೋಲ್, ಡಿಸೇಲ್ ದರ, ವಿದ್ಯತ್ ದರ ಸೇರಿಂತೆ ಹಲವಾರು ಜನವಿರೋಧಿ ನೀತಿಗಳನ್ನು ಪ್ರತಿಭಟನೆಲ್ಲಿ ವಿರೋಧಿಸುವುದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದರು.

Facebook Comments