ತೈಲ ಬೆಲೆ ಏರಿಕೆ ಕುರಿತು ಬಿಜೆಪಿ ಮೌನವನ್ನು ಪ್ರಶ್ನಿಸಿದ ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27- ಈ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದಾಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ಬಿಜೆಪಿಯ ನಾಯಕರು ಈಗ ಮೌನವಾಗಿರುವುದೇಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ತಿಂಗಳಿನಲ್ಲಿ ಹತ್ತಕ್ಕೂ ಹೆಚ್ಚು ಬಾರಿ ತೈಲ ಬೆಲೆ ಏರಿಕೆಯಾಗಿದೆ. ಇಂಧನದ ಬೆಲೆ ಏರಿಕೆಯಾಗುತ್ತಿದ್ದಂತೆ ಸಾಗಾಣಿಕೆ ವೆಚ್ಚ ಕೂಡ ಹೆಚ್ಚಾಗುತ್ತಿದೆ. ಕಬ್ಬಿಣ, ಸಿಮೆಂಟ್, ಬಟ್ಟೆ , ದವಸ ಧಾನ್ಯ ಸೇರಿದಂತೆ ಎಲ್ಲಾ ವಸ್ತುಗಳ ದರ ಕೂಡ ಏರಿಕೆಯಾಗುತ್ತಿದೆ ಎಂದರು.

ಈ ಹಿಂದೆ ಬಿಜೆಪಿ ನಾಯಕರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದಾಗ ಏನೆಲ್ಲಾ ಮಾತನಾಡಿದರು ಎಂಬುದನ್ನು ಮಾಧ್ಯಮಗಳು ಜನರ ಮುಂದಿಡಬೇಕು. ಈಗ ಬಹುತೇಕ ಅವರೆಲ್ಲಾ ಸಚಿವರಾಗಿ ಆಡಳಿತದಲ್ಲಿದ್ದಾರೆ. ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಈಗ ಏರಿಕೆಯಾಗುತ್ತಿದ್ದರೂ, ಬಿಜೆಪಿ ನಾಯಕರು ಬಾಯಿ ಬಿಡದೆ ಮೌನವಾಗಿರುವುದೇಕೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ದಿನ ಒಂದೊಂದು ಕಾನೂನು ಮಾಡುತ್ತಿದೆ. ಮಂಗಳೂರಿನಲ್ಲಿ ಬೀಡಿ ಸುತ್ತುವ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಸರ್ಕಾರಗಳ ಕಾರ್ಮಿಕ ವಿರೋಧಿ ಕಾನೂನುಗಳನ್ನು ಖಂಡಿಸಿ ಬೀಡಿ ಕಾರ್ಮಿಕರು ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಕೊರೊನಾದ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪಟ್ಟಣ ಪಂಚಾಯ್ತಿ, ನಗರಸಭೆ, ಮಹಾನಗರ ಪಾಲಿಕೆಗಳ ಆಸ್ತಿ ತೆರಿಗೆಗಳನ್ನು ಹೆಚ್ಚಳ ಮಾಡಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿತ್ತು. ಅದರಲ್ಲಿ ಯಾರಿಗೆ ಯಾವ  ನೆರವು ನೀಡಲಾಗಿದೆ ಎಂಬ ಮಾಹಿತಿ ಕೊಡಲು ಕೇಂದ್ರ ಸರ್ಕಾರ ಹಿಂಜರಿಯುತ್ತಿದೆ ಎಂದು ಡಿಕೆಶಿ ಲೇವಡಿ ಮಾಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ಕಾಂಗ್ರೆಸ್ ಪ್ರತಿ ಹಂತದಲ್ಲೂ ಪ್ರತಿಭಟಿಸುತ್ತಲೇ ಬರುತ್ತಿದೆ ಎಂದರು.

Facebook Comments