ಸಿಎಂ ಹುದ್ದೆಗೆ ನಾನು ಪೈಪೋಟಿ ಮಾಡಿಲ್ಲ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಏ.8- ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕೆ ಮಾತ್ರ ನನ್ನ ಪೈಪೋಟಿ, ಮುಖ್ಯಮಂತ್ರಿಯಾಗಲು ನಾನು ಯಾವ ಪೈಪೋಟಿಯನ್ನು ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಅವರನ್ನು ಚಿಕ್ಕಬಾಗೇವಾಡಿಯ ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜನ ಪರ ಹೋರಾಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಇದೆ ಎಂಬುದು ಆಧಾರ ರಹಿತ ವದ್ಧಂತಿ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳಿ ಅವರನ್ನು ಬಲವಂತವಾಗಿ ಕಣಕ್ಕಿಳಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನಾವು ನಮ್ಮ ಪಕ್ಷದಿಂದ ಯಾರನ್ನು ಬೇಕಾದರೂ ಅಭ್ಯರ್ಥಿ ಮಾಡುತ್ತೇವೆ. ಅದು ಅವರಿಗೆ ಸಂಬಂಧಪಡದ ವಿಷಯ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡದ ನೀರು ಪೂರೈಕೆ ವ್ಯವಸ್ಥೆಯನ್ನು ಕಾಪೋರೆಟ್ ಕಂಪೆನಿ ಎಲ್ ಅಂಡ್ ಟಿ ಸಂಸ್ಥೆಗೆ ವಹಿಸಿರುವುದೇಕೆ ಎಂದು ಮೊದಲು ಪ್ರಹ್ಲಾದ್ ಜೋಷಿ ಉತ್ತರಿಸಲಿ. ಮೊದಲಿನಿಂದಲೂ ನೀರು ಪೂರೈಕೆ ಜವಾಬ್ದಾರಿಯನ್ನು ಸರ್ಕಾರ ಮತ್ತು ಮಹಾನಗರ ಪಾಲಿಕೆ ನಿರ್ವಹಣೆ ಮಾಡುತ್ತಿತ್ತು. ಅದನ್ನು ಇವರ ಆಡಳಿತದಲ್ಲಿ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಕಾಂಗ್ರೆಸ್ ಇದರ ವಿರುದ್ಧ ತೀವ್ರ ಹೋರಾಟ ನಡೆಸಲಿದೆ ಎಂದು ಹೇಳಿದರು.

ಕಾಂಗ್ರೆಸ್ ಮೊದಲಿನಿಂದಲೂ ರೈತರ ಪರವಾದ ಹೋರಾಟ ನಡೆಸುತ್ತಲೇ ಬಂದಿದೆ. ಮುಂದೆ ಕೂಡ ರೈತರಿಗೆ ತನ್ನ ಬೆಂಬಲವನ್ನು ಮುಂದುವರೆಸಲಿದೆ. ಜನ ಬಿಜೆಪಿ ಆಡಳಿತದಿಂದ ಬೇಸರಗೊಂಡಿದ್ದಾರೆ. ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ಉಪಚುನಾವಣೆಗಳಲ್ಲಿ ಕಾಂಗ್ರೆಸ್‍ನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.

Facebook Comments