ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆ : ಡಿಕೆಶಿ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಹಾನಗಲ್, ಅ.22- ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್‍ದಾರರಿಗೆ ಉಚಿತವಾಗಿ ಸಿಲಿಂಡರ್ ಕೊಟ್ಟಿದೆ. ಉಪಚುನಾವಣೆಯಲ್ಲಿ ಬಿಜೆಪಿಗೇ ಮತ ಹಾಕಿ ಎಂದು ಕೇಳುವ ಮೂಲಕ ನೀತಿ-ಸಂಹಿತೆ ಉಲ್ಲಂಘಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ನರೇಗಲ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯ ಕಾಲ್‍ಸೆಂಟರ್‍ನಿಂದ ಮತದಾರರಿಗೆ ಫೋನ್ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಟ್ಟಿದ್ದಾರೆ.

ಹಾಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಎಂದು ಮನವಿ ಮಾಡಲಾಗುತ್ತಿದೆ. ಕರೆ ಸ್ವೀಕರಿಸಿದ ಮತದಾರನೊಬ್ಬ ಗ್ಯಾಸ್ ಸಿಲಿಂಡರ್‍ಅನ್ನು ಬಿಜೆಪಿಯವರು ಮನೆಯಿಂದ ತಂದುಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ನೀವು ಸಿಲಿಂಡರ್ ಕೊಟ್ಟಿದ್ದಕ್ಕಾಗಿ ಮತ ಕೇಳುತ್ತಿದ್ದೀರ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಉಚಿತವಾಗಿ ಅಕ್ಕಿ ಕೊಟ್ಟಿದ್ದರು. ಅದರಲ್ಲಿ ದಿನ ಅನ್ನ ತಿನ್ನುತ್ತಿದ್ದೇವೆ. ಹಾಗಗಿದ್ದರೆ ಕಾಂಗ್ರೆಸ್‍ಗೆ ವೋಟ್ ಹಾಕುವುದು ಬೇಡವೇ ಎಂದು ಮರು ಪ್ರಶ್ನಿಸಿದ್ದಾನೆ. ನೀವು ಸಿಲಿಂಡರ್ ಅಲ್ಲ, ಏನೇ ಕೊಟ್ಟರೂ ನಾನು ಕಾಂಗ್ರೆಸ್‍ಗೇ ಮತ ಹಾಕುತ್ತೇನೆ ಎಂದು ಮತದಾರ ಹೇಳಿರುವ ಆಡಿಯೋ ವೈರಲ್ ಆಗಿದೆ. ಬಿಜೆಪಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ನಾವು ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ. ಸಿದ್ಧಾಂತ ಹಾಗೂ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಮತ ಕೇಳುತ್ತೇವೆ. ಅಭಿವೃದ್ಧಿ ವಿಷಯಗಳ ಕುರಿತಂತೆ ಬಿಜೆಪಿಯವರು ಬಹಿರಂಗ ಚರ್ಚೆಗೆ ಬಂದರೆ ನಾವು ಸಿದ್ಧರಿದ್ದೇವೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಡಬ್ಬಲ್ ಎಂಜಿನ್ ಸರ್ಕಾರ ಬಂದರೆ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ್ದರು.

ಆದರೆ, ಎಲ್ಲಿ ಅಭಿವೃದ್ಧಿಯಾಗಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಗಳು ಕೈಗೆಟಕದಂತೆ ಗಗನಕ್ಕೇರಿವೆ. ಬಿಜೆಪಿಯವರಿಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕೆಂದು ಜನ ಪ್ರಶ್ನಿಸುತ್ತಿದ್ದಾರೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.

ಇಷ್ಟು ದಿನ ಉಪಚುನಾವಣಾ ಕಣದಲ್ಲಿ ವೈಯಕ್ತಿಕ ನಿಂದನೆಗಳು, ಟೀಕೆ-ಟಿಪ್ಪಣಿಗಳ ಮೇಲೆ ಪ್ರಚಾರ ನಡೆಯುತ್ತಿತ್ತು. ಇಂದು ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ಮನೋಹರ್ ತಹಸೀಲ್ದಾರ್, ತುಕಾರಾಮ್, ಶಿವಶಂಕರ್‍ರೆಡ್ಡಿ, ಸಾಸಕರಾದ ರಿಜ್ವಾನ್ ಅರ್ಷದ್, ಬೈರತಿ ಸುರೇಶ್ ಮತ್ತಿತರರು ಹಾಜರಿದ್ದರು.

Facebook Comments