ರೈತರು ಬೇಸಾಯ ಮಾಡಿ ಆದಾಯ ತೆರಿಗೆ ಕಟ್ಟುವಂತಹ ಶಕ್ತಿವಂತರಾಗಿಲ್ಲ : ಡಿ.ಕೆ.ಶಿ
ಕನಕಪುರ, ಜೂ.16- ರೈತರು ಬೇಸಾಯ ಮಾಡಿ ಆದಾಯ ತೆರಿಗೆ ಕಟ್ಟುವಂತಹ ಶಕ್ತಿವಂತರಾಗಿಲ್ಲ ಕೈಗಾರಿಕೆಗಳಿದ್ದರೆ ಮಾತ್ರ ಉದ್ಯೋಗ ಸೃಷ್ಟಿಯಾಗಿ ತೆರಿಗೆ ಕಟ್ಟಲು ಸಾಧ್ಯವೆಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಕನಕಪುರ ನಗರದ ಹೊರವಲಯದಲ್ಲಿ ಅರಳಾಳುಬಳಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕನಕಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮುಖಂಡರ ಅಭಿನಂದನೆ ಮತ್ತು ಕೃತಜ್ಞತಾ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದರು.
ಕೃಷಿಕರಿಗೆ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ವಿನಾಯತಿ ಇರುವುದರಿಂದ ಸರ್ಕಾರ ಈ ಕ್ಷೇತ್ರದಿಂದ ಹೆಚ್ಚಿನ ಆದಾಯವನ್ನು ನೀರೀಕ್ಷೆ ಮಾಡಲಾಗದು ಇದಕ್ಕೆ ಬದಲಾಗಿ ಕೈಗಾರಿಕೆಗಳು ಬಂದಾಗ ಮಾತ್ರ ಉದ್ಯೋಗ ಸೃಷ್ಠಿಯ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಆದಾಯವನ್ನು ನಿರೀಕ್ಷೆ ಮಾಡಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯ ತಿಳಿಸಿದರು.
ಕನಕಪುರ ತಾಲೂಕಿನ ಅಭಿವೃದ್ದಿಗೆ ಸಂಬಂಧಿಸಿದಂತೆ 2000ಸಾವಿರ ಕೋಟಿ ಅನುದಾನವನ್ನು ತರಲಾಯಿತು ಹಾಗೆಯೇ ಇಡೀ ರಾಮನಗರ ಜಿಲ್ಲೆಯಾದ್ಯಂತ ಪ್ರತಿ ತಾಲೂಕಿನ ಅಭಿವೃದ್ದಿಗೆ 1ಸಾವಿರಕೋಟಿ ಅನುದಾನವನ್ನು ಸರ್ಕಾರ ನೀಡಿದೆ ಸರ್ಕಾರ ಅಭಿವೃದ್ಧಿಗೆ ಹಣ ನೀಡಬೇಕಾದರೆ ಎಲ್ಲಿಂದ ತರಬೇಕು ಕೈಗಾರಿಕೋದ್ಯಮಿಗಳು ಅಥವಾ ಮಹಾನಗರ ಪಾಲಿಕೆಗಳ ತೆರಿಗೆ ಹಣದಿಂದ ಮಾತ್ರ ಆದಾಯವನ್ನು ನಿರೀಕ್ಷೆ ಮಾಡಬೇಕಾದ ಸಂದರ್ಭದಲ್ಲಿ ಕಳೆದ ನಾಲ್ಕು ತಿಂಗಳಿಂದ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಆರ್ಧಿಕ ವಹಿವಾಟು ಸ್ಥಗಿತಗೊಂಡಿತ್ತು ಆದ್ದರಿಂದ ನಮ್ಮ ಮನೆ ಕುಟುಂಬದ ನಿರ್ವಹಣೆಯ ಹಿನ್ನೆಲೆಯಲ್ಲಿ ಆರ್ಧಿಕ ಭದ್ರತೆಯನ್ನು ನೋಡಿಕೊಂಡಂತೆ ರಾಜ್ಯದ ಆರ್ಧಿಕ ಸುಭದ್ರತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇಡೀ ರಾಜ್ಯದಲ್ಲಿ ಇರುವ 150 ತಾಲೂಕಿನಲ್ಲಿ ಸ್ಥಳೀಯವಾಗಿ ಸೋಲಾರ್ ವಿದ್ಯತ್ ಉತ್ಪಾದನೆಯನ್ನು ಮಾಡುವ ಕೆಲಸವನ್ನು ನಾನು ವಿದ್ಯುತ್ ಸಚಿವನಾಗಿದ್ದಾಗ ಮಾಡಿದ್ದೇನೆ ಹಾಗೆಯೇ ನಮ್ಮ ತಾಲೂಕಿನಲ್ಲೇ 35 ಮ್ಯೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತಿದೆ, ದೊಡ್ಡಾಲಹಳ್ಳಿ ಬಳಿ 13000 ಎಕರೆಯಲ್ಲಿ ರೈತರ ಜಮೀನನ್ನು ಬಾಡಿಗೆಗೆ ವಾರ್ಷಿಕವಾಗಿ ತೆಗೆದುಕೊಂಡು ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಬಹುಮತದ ಸರ್ಕಾರ ಇದ್ದರೂ ಸಹ ಈ ನಾಡು ನುಡಿ ಧರ್ಮದ ವಿಚಾರ ಬಂದಾಗ ನಾನು ಮತ್ತು ಪ್ರಜ್ವಲ್ ರೇವಣ್ಣನವರು ಏಕಾಂಗಿಯಾಗಿ ರಾಜ್ಯ ಹಿತವನ್ನು ಮನಗಂಡು ಹೋರಾಡುತ್ತೇವೆ ಎಂದರು.
ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಈ ರಾಜ್ಯದ ಜನತೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ಕರ್ನಾಟಕ ಅಭಿವೃದ್ದಿಯನ್ನು ಅವರೇ ಕಡೆಗಣಿಸಿಕೊಂಡಿದ್ದಾರೆ ಈ ರಾಜ್ಯ ಪರವಾಗಿ ಸಂಸತ್ನಲ್ಲಿ ಅವರ ಉಪಸ್ಥಿತಿ ಅತಿಮುಖ್ಯವಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿ. ಪಂ. ಅಧ್ಯಕ್ಷ ಎಂ.ಎನ್. ನಾಗರಾಜು, ತಾ.ಪಂ. ಅಧ್ಯಕ್ಷ ಧನಂಜಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಮಾಜಿ ಅಧಕ್ಷ ಸಿದ್ದಮರೀಗೌಡ, ಮುಖಂಡ ವಿಶ್ವನಾಥ್,ಚಿನ್ನಸ್ವಾಮಿ,ನಾರಾಯಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಎಂ.ಡಿ.ವಿಜಯೆದೇವ್ ಮತ್ತಿತರರು ಉಪಸ್ಥಿತರಿದ್ದರು.