ಐಟಿ ದಾಳಿ ಪ್ರಕರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಭಾರಿ ಹಿನ್ನಡೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜೂ.೨೫ : ಆದಾಯ ತೆರಿಗೆ ದಾಳಿ ವಿಚಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹಿನ್ನಡೆ ಉಂಟಾಗಿದೆ. ಪ್ರಕರಣದಿಂದ ತಮ್ಮ ಹೆಸರು ಕೈ ಬಿಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಮಂಗಳವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಪ್ರಕಟಿಸಿದರು.

ಪ್ರಕರಣದ ವಿಚಾರಣೆಯನ್ನು ಮುಂದುವರೆಸಬಹುದು ಎಂದು ತೀರ್ಪು ನೀಡಿದರು. ಅರ್ಜಿದಾರರು ಆದಾಯ ತೆರಿಗೆ ಕಾಯ್ದೆ–1961ರ ಕಲಂ 276 ಸಿ (1) ಮತ್ತು 277ರ ಅನುಸಾರ ಶಿಕ್ಷಾರ್ಹ ಅಪರಾಧ ಎಸಗಿದ್ದು, ಹೆಚ್ಚಿನ ತನಿಖೆಯ ಅಗತ್ಯವಿದೆ. ಈ ಹಂತದಲ್ಲಿ ಪ್ರಕರಣ ರದ್ದುಗೊಳಿಸಬಾರದು ಎಂದು ಆದಾಯ ತೆರಿಗೆ ಇಲಾಖೆ ಪರ ವಕೀಲರು ಮನವಿ ಮಾಡಿದ್ದರು.

ಇದರಿಂದಾಗಿ ಶಿವಕುಮಾರ್ ಸೇರಿದಂತೆ ಪ್ರಕರಣದ ಉಳಿದ ಆರೋಪಿಗಳ ವಿರುದ್ಧ ಇದೇ ನ್ಯಾಯಾಲಯ ದೋಷರೋಪ ಪ್ರಕ್ರಿಯೆ ಆರಂಭಿಸಲಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರನ್ನು ಈ ಹಿಂದಿನ ನ್ಯಾಯಾಧೀಶ ಬಿ.ವಿ.ಪಾಟೀಲ ಪ್ರಕರಣದಿಂದ ಮುಕ್ತಿ ನೀಡಿ ಆದೇಶಿಸಿದ್ದರು.

3 ಪ್ರಕರಣಗಳಿಂದ ಮುಕ್ತರಾಗಿದ್ದ ಡಿಕೆಶಿಗೆ 4ನೇ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ. ಪ್ರಕರಣದಿಂದ ಡಿಕೆಶಿ ಹೆಸರು ಕೈಬಿಡಲು ನ್ಯಾಯಾಧೀಶ ರಾಮಚಂದ್ರ ಹುದ್ದರ್ ನಿರಾಕರಿಸಿದ್ದಾರೆ. ಹಾಗಾಗಿ ಡಿಕೆಶಿ ಮೇಲಿನ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.

ಡಿ.ಕೆ.ಶಿವಕುಮಾರ್ ದೆಹಲಿ ಫ್ಲ್ಯಾಟ್ ನಲ್ಲಿ ಸಿಕ್ಕಿದ್ದ ಹಣ ಸಂಕಷ್ಟ ತಂದಿದೆ. ಐಟಿ ಇಲಾಖೆ ದಾಖಲಿಸಿದ್ದ ನಾಲ್ಕನೇ ಪ್ರಕರಣ ಡಿಕೆಶಿಗೆ ಸುತ್ತಿಕೊಂಡಿದೆ. ಆಗಸ್ಟ್ 2017 ರಲ್ಲಿ ಡಿಕೆಶಿಗೆ ಸಂಬಂಧಿಸಿದ್ದ ವಿವಿಧ ಆಸ್ತಿಗಳ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು.

2017ರಲ್ಲಿ ನಡೆದ ಐಟಿ ದಾಳಿಯ ಬಳಿಕ ಜಾರಿ ನಿರ್ದೇಶನಾಲಯ ದಾಖಲು ಮಾಡಿರುವ ಪ್ರಕರಣದಿಂದ ತಮ್ಮ ಹೆಸರು ಕೈ ಬಿಡಬೇಕು ಎಂದು ಡಿ.ಕೆ.ಶಿವಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಮಂಗಳವಾರಕ್ಕೆ ಕಾಯ್ದಿರಿಸಿತ್ತು.

ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಟರ್ ಜನರಲ್ ಪ್ರಭುಲಿಂಗ ಕೆ.ನಾವಡಗಿ ವಾದ ಮಂಡನೆ ಮಾಡಿದ್ದರು. ಆರೋಪಿಗಳು ದಂಡನೀಯ ಅಪರಾಧವನ್ನು ಮಾಡಿದ್ದಾರೆ ಎಂದು ವಾದ ಮಂಡಿಸಿದ್ದರು.

# ಏನಿದು ಪ್ರಕರಣ?
2017ರಲ್ಲಿ ಡಿ.ಕೆ.ಶಿವಕುಮಾರ್ ಅವರ ಬೆಂಗಳೂರು, ದೆಹಲಿ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ದೆಹಲಿಯ ಸಫ್ದರ್ ಜಂಗ್ ಎನ್ಕ್ಲೇವ್‌ನಲ್ಲಿನ ನಿವಾಸದಲ್ಲಿ 8.59 ಕೋಟಿಗೂ ಅಧಿಕ ಮೊತ್ತದ ಹಣ ಪತ್ತೆಯಾಗಿತ್ತು. ಈ ಹಣಕ್ಕೆ ಅಗತ್ಯ ದಾಖಲೆಗಳನ್ನು ನೀಡಿರಲಿಲ್ಲ. ಆದ್ದರಿಂದ, ಐಟಿ ಇಲಾಖೆಯ ಸೂಚನೆಯಂತೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿತ್ತು.

ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್, ಎನ್.ರಾಜೇಂದ್ರ, ಆಂಜನೇಯ ಮತ್ತು ಹನುಮಂತಯ್ಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿತ್ತು. ಡಿ.ಕೆ.ಶಿವಕುಮಾರ್ ಅವರು ಪ್ರಕರಣದಲ್ಲಿ ತಮ್ಮ ಹೆಸರನ್ನು ಕೈಬಿಡಬೇಕು ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಟರ್ ಜನರಲ್ ಪ್ರಭುಲಿಂಗ ಕೆ.ನಾವಡಗಿ ಅವರು ವಾದ ಮಂಡನೆ ಮಾಡಿ, ಆರೋಪಿಗಳು ಆದಾಯ ತೆರಿಗೆ ಕಾಯ್ದೆ 1961ರ ಕಲಂ 276 ಸಿ (1) ಮತ್ತು 277ರ ಪ್ರಕಾರ ದಂಡನೀಯ ಅಪರಾಧ ಎಸಗಿದ್ದಾರೆ. ಹವಾಲಾ ಮೂಲಕ ಬೆಂಗಳೂರಿನಿಂದ ದೆಹಲಿಗೆ ಹಣ ಸಾಗಣೆ ಮಾಡಿದ್ದಾರೆ ಎಂದು ವಾದ ಮಂಡಿಸಿದ್ದರು.

ಈ ಪ್ರಕರಣದಲ್ಲಿ ಇ.ಡಿ, ಶಿವಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120-‘ಬಿ’ (ಅಪರಾಧಿಕ ಒಳಸಂಚು) ಅನುಸಾರ ಪ್ರಕರಣ ದಾಖಲಿಸಿದೆ. ಅಂತೆಯೇ ಆದಾಯ ತೆರಿಗೆ ಕಾಯ್ದೆ-1961ರ ಕಲಂ 276 ಸಿ (1) ಮತ್ತು 277ರ ಪ್ರಕಾರ ದಂಡನೀಯ ಅಪರಾಧ ಎಸಗಿದ್ದಾರೆ’ ಎಂದೂ ಆರೋಪಿಸಲಾಗಿತ್ತು.

ಕೇವಲ ಸಾಕ್ಷಿಗಳ ಹೇಳಿಕೆ ಆಧರಿಸಿ ಐಟಿ ಇಲಾಖೆ ದೂರು ದಾಖಲಿಸಿದೆ. ಐಟಿ ರಿಟನ್ರ್ಸ್ ಸಲ್ಲಿಸುವ ಮೊದಲೇ ದಾಳಿ ಮಾಡಿ ಆರೋಪ ಮಾಡಲಾಗಿದೆ. ನನ್ನ ಆಸ್ತಿಯನ್ನ ಘೋಷಣೆ ಮಾಡಿಕೊಳ್ಳಲು ಐಟಿ ಸಮಯವನ್ನೇ ನೀಡಿಲ್ಲ. ಐಟಿ ಇಲಾಖೆ ಡೆಪ್ಯೂಟಿ ಡೈರಕ್ಟರ್ಗೆ ದೂರು ನೀಡುವ ಅಧಿಕಾರವೇ ಇಲ್ಲ. ದೆಹಲಿ ಫ್ಲ್ಯಾಟ್ನಲ್ಲಿ ಸಿಕ್ಕ ಹಣದಲ್ಲಿ 40 ಲಕ್ಷ ರೂ. ಕೃಷಿಯಿಂದ ಬಂದ ಆದಾಯ. 8.56 ಕೋಟಿ ರೂ.ನಲ್ಲಿ ಉಳಿದ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

ಹೀಗಾಗಿ, ಐಟಿ ಮಾಡುತ್ತಿರುವ ಆರೋಪದಿಂದ ಮುಕ್ತ ಮಾಡಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದರು.
ಐಟಿ ಪರ ಅಡಿಷನಲ್ ಸಾಲಿಟರ್ ಜನರಲ್ ಪ್ರಭುಲಿಂಗ ನಾವಡಗಿ ವಾದ ನಡೆಸಿದ್ದು, ಹವಾಲ ಮೂಲಕ ಹಣ ವರ್ಗಾವಣೆಯಾಗಿದ್ದು, ಕೋಡ್ ವರ್ಡ್ ಬಳಕೆಯಾಗಿದೆ.

ಸುನಿಲ್ ಶರ್ಮಾ ಪ್ಲಾಟ್ನಲ್ಲೂ ಡಿಕೆ ಶಿವಕುಮಾರ್ ಒಂದು ರೂಮ್ ಬಳಸುತ್ತಿದ್ದರು . ಹಣ ಸಾಗಣಿಕೆ ಮಾಡಿದ್ದ ಸುನಿಲ್ ಶರ್ಮಾ ಡಿಕೆಶಿಗೆ ಸೇರಿದ್ದು ಎಂದು ಹೇಳಿದ್ದಾರೆ . ಡಿಕೆಶಿ ಮನೆಯಲ್ಲಿ ಸಿಕ್ಕ ಹಣ ಹಾಗೂ ಆಭರಣಗಳಿಗೆ ಸಮರ್ಪಕ ದಾಖಲೆಗಳಿಲ್ಲ . ಹಣ ವಶಪಡಿಸಿಕೊಂಡ 120 ದಿನ ಕಾಲಾವಕಾಶ ನೀಡಿದರೂ ದಾಖಲೆ ಸಲ್ಲಿಸಿಲ್ಲ .

ಐಟಿ ಅಧಿಕಾರಿಗಳು ಸಲ್ಲಿಸಿರುವ ದೂರು ಕ್ರಮಬದ್ಧವಾಗಿದೆ ಎಂದು ವಾದ ಮಂಡಿಸಿದ್ದರು. ಐಟಿ ದಾಳಿಯ ವೇಳೆ ದೆಹಲಿಯ ನಿವಾಸದಲ್ಲಿ ಸಿಕ್ಕ ಹಣ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ್ದು. 8.59 ಕೋಟಿ ಮೊತ್ತದ ಹಣಕ್ಕೆ ಅಗತ್ಯ ದಾಖಲೆಗಳನ್ನು ನೀಡುವಲ್ಲಿ ಆರೋಪಿಗಳು ವಿಫಲರಾಗಿದ್ದಾರೆ. ಎಲ್ಲಾ ಆರೋಪಿಗಳು ಐಪಿಸಿ ಕಲಂ 120ಬಿ ಅಡಿ ಒಳಸಂಚು ರೂಪಿಸಿದ್ದಾರೆ ಎಂದು ವಾದ ಮಂಡನೆ ಮಾಡಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin