ನಾಳೆ ಬೆಂಗಳೂರಿಗೆ ಡಿಕೆಶಿ ಆಗಮನ, ಅದ್ಧೂರಿ ಸ್ವಾಗತಕ್ಕೆ ಫ್ಯಾನ್ಸ್ ಭರ್ಜರಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.25- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಾಳೆ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸುತ್ತಿದ್ದು, ಅದ್ಧೂರಿಯಾಗಿ ಸ್ವಾಗತ ಮಾಡಲು ಅಭಿಮಾನಿ ಪಡೆ ತಯಾರಿ ನಡೆಸಿದೆ.

ಬುಧವಾರ ರಾತ್ರಿ ಜೈಲಿನಿಂದ ಬಿಡುಗಡೆಯಾಗಿರುವ ಡಿ.ಕೆ.ಶಿವಕುಮಾರ್ ಅವರು ನಿನ್ನೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ನಂತರ ವಕೀಲರೊಂದಿಗೆ ಚರ್ಚೆ ನಡೆಸಿದರು.

ಸಿಎಂಎಲ್‍ಎ ನ್ಯಾಯಾಲಯ ಡಿ.ಕೆ.ಶಿವಕುಮಾರ್ ಅವರಿಗೆ ವಿಧಿಸಿದ್ದ ನ್ಯಾಯಾಂಗ ಬಂಧನದ ಅವಧಿ ಇಂದು ಮುಕ್ತಾಯಗೊಳ್ಳಲಿದೆ. ಈಗಾಗಲೇ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದರಿಂದ ನ್ಯಾಯಾಂಗ ಬಂಧನದ ಅವಧಿ ಅನೂರ್ಜಿತಗೊಳ್ಳಲಿದೆ. ಆದರೂ, ಔಪಚಾರಿಕವಾಗಿ ಸಿಎಂಎಲ್‍ಎ ನ್ಯಾಯಾಲಯ ವಿಚಾರಣೆ ನಡೆಸಿದೆ. ಈ ವೇಳೆ ಡಿ.ಕೆ.ಶಿವಕುಮಾರ್ ಖುದ್ದಾಗಿ ಹಾಜರಾಗಿದ್ದಾರೆ.ಹೈಕೋರ್ಟ್ ನೀಡಿರುವ ಜಾಮೀನು ಪ್ರತಿಯನ್ನು ಕೆಳಹಂತದ ನ್ಯಾಯಾಲಯಕ್ಕೆ ಸಲ್ಲಿಸಿ ಪಾರ್ಸ್‍ಫೋರ್ಟ್‍ನ್ನು ಒಪ್ಪಿಸಿ, ಕೆಲವು ನಿಯಮಗಳನ್ನು ಪಾಲನೆ ಮಾಡಿದ ಬಳಿಕ ಡಿ.ಕೆ.ಶಿವಕುಮಾರ್ ಸ್ವತಂತ್ರರಾಗಲಿದ್ದಾರೆ.

ಇಂದು ನ್ಯಾಯಾಲಯಕ್ಕೆ ಹಾಜರಾಗಬೇಕಾದ್ದರಿಂದ ನಾಳೆ ಬೆಂಗಳೂರಿಗೆ ವಾಪಸಾಗಲು ನಿರ್ಧಾರಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಜೈಲಿನಲ್ಲಿದ್ದಾಗ ಭಾರೀ ಪ್ರಮಾಣದಲ್ಲಿ ಜನ ಬೆಂಬಲ ವ್ಯಕ್ತವಾಗಿದ್ದು, ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟಿಸಿದ್ದರು. ಅದೇ ಮಾದರಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಇವರನ್ನು ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸಜ್ಜಾಗಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಅಭಿಮಾನಿಗಳು ಆಗಮಿಸುವಂತೆ ಕೆಲವು ನಾಯಕರು ಸಾಮಾಜಿಕ ಜಾಲ ತಾಣಗಳಲ್ಲಿ ಕರೆ ನೀಡುತ್ತಿದ್ದಾರೆ. ಯಾವುದೇ ಸಂಘಟಿತ ಕಾರ್ಯಕ್ರಮವಾಗಿರದೆ ಸ್ವಯಂ ಪ್ರೇರಿತವಾಗಿ ಅಭಿಮಾನಿಗಳು ತಮ್ಮ ನಾಯಕರನ್ನು ಬರಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ಎಸ್.ಎಂ.ಕೃಷ್ಣ ಅವರು ಕೇಂದ್ರ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಬೆಂಗಳೂರಿಗೆ ವಾಪಸಾದ ಸಂದರ್ಭದಲ್ಲಿ ಇದೇ ರೀತಿಯ ಸ್ವಾಗತ ನೀಡಲಾಗಿತ್ತು.

Facebook Comments