“ಮುಂದೇನಾಗಲಿದೆ ಎಂಬುದನ್ನು ಕಾದು ನೋಡಿ” : ಕುತೂಹಲ ಕೆರಳಿಸಿದ ಡಿಕೆಶಿ ಮಾತು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.8- ಮುಂದೇನಾಗಲಿದೆ ಎಂಬುದನ್ನು ನೀವೇ ಕಾದು ನೋಡಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದರು.ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಂದಿನ ನಿನ್ನ ನಡೆ ಏನು ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಮುಂದೆ ಏನಾಗುತ್ತೆ ಎಂಬುದನ್ನು ಕಾದು ನೋಡಿ ಎಂದು ಉತ್ತರಿಸಿದರು.

ನನ್ನ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ಡಿಕೆಶಿ ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಹೇಳಿದರು. ನಾನೊಬ್ಬ ರಾಜಕಾರಣಿ. ನನ್ನ ದಿನಚರಿ ರಾಜ್ಯಕ್ಕೆ, ಜನರಿಗೆ ಒಳ್ಳೆಯದಾಗಲಿ ಎಂದು ಬಯಸುವುದಾಗಿದೆ. ನಾನು ಯಾರಿಗೂ ಕೆಡುಕು ಬಯಸುವುದಿಲ್ಲ ಎಂದು ತಿಳಿಸಿದರು.

ಅಸೆಂಬ್ಲಿಯಲ್ಲಿ ಒಂದು ತಕ್ಕಡಿ ಇದೆ. ಅದು ಮೇಲೆ ಕೆಳಗೆ ತೂಗುತ್ತಿರುತ್ತದೆ. ನ್ಯಾಯ ಯಾವ ಕಡೆ ಇರುತ್ತದೆಯೋ ಅದನ್ನು ತಕ್ಕಡಿ ಎತ್ತಿ ಹಿಡಿಯುತ್ತದೆ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದರು. ನಾಡ ಅಧಿದೇವತೆ ಚಾಮುಂಡೇಶ್ವರಿ ಶಕ್ತಿದೇವತೆ. ಇಂದು ದೇವಿಯಲ್ಲಿ ನಾನು, ನನ್ನ ಕುಟುಂಬ, ರಾಜ್ಯ ಹಾಗೂ ಪಕ್ಷಭೇದ ಮರೆತು ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.

ನಾನು ನ್ಯಾಯಾಲಯಕ್ಕೆ ಬಂದಾಗ ಹಲವಾರು ಮಂದಿ ಅಬಿಮಾನಿಗಳು ಆಗಮಿಸಿ ಚಾಮುಂಡೇಶ್ವರಿ ದೇವಿಯ ಪ್ರಸಾದ ತಂದಿದ್ದೇನೆ. ಒಳಿತಾಗಲಿದೆ ತೆಗೆದುಕೊಳ್ಳಿ ಎಂದು ಕೊಡುತ್ತಿದ್ದರು. ನನಗೂ ದೇವಿಯಲ್ಲಿ ಅತಿ ಹೆಚ್ಚು ಭಕ್ತಿ ಹಾಗೂ ನಂಬಿಕೆ ಇದೆ. ಆದ್ದರಿಂದ ಇಂದು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ನಮ್ಮ ಪಕ್ಷದಲ್ಲಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಎಲ್ಲ ಇದ್ದಾರೆ. ಅವರೊಂದಿಗೆ ನಾನೊಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಶಿವಕುಮಾರ್ ತಿಳಿಸಿದರು.

Facebook Comments