ಜೆಡಿಎಸ್ ಜೊತೆ ಡಿಕೆಶಿ ಕುಚುಕು, ಸಿದ್ದರಾಮಯ್ಯಗೆ ಕಸಿವಿಸಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.9- ವಿಪಕ್ಷನಾಯಕ ಸಿದ್ದರಾಮಯ್ಯನವರು ಜೆಡಿಎಸ್ ಜೊತೆ ಅಂತರ ಕಾಯ್ದುಕೊಳ್ಳಬೇಕೆಂದು ಪದೇ ಪದೇ ಪ್ರತಿಪಾದಿಸುತ್ತಿದ್ದರೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ನಾಯಕರ ಜೊತೆ ಆತ್ಮೀಯತೆ ಹೆಚ್ಚಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಲು ಆರಂಭಿಸಿದ್ದಾರೆ.

ಇತ್ತೀಚೆಗೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಬಂದ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರು ಏರ್‌ಪೋರ್ಟ್‌ಗೆ ತೆರಳಿ ಸ್ವಾಗತಿಸಿದ್ದರು. ಅಲ್ಲಿ ನಡೆದ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಜೆಡಿಎಸ್‍ನ ಬಾವುಟವನ್ನು ಹಿಡಿದದ್ದು ಚರ್ಚೆಗೆ ಗ್ರಾಸವಾಗಿತ್ತು.  ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಇದನ್ನು ತೀವ್ರವಾಗಿ ಆಕ್ಷೇಪಿಸಿದರು.

ಇತ್ತೀಚೆಗೆ ಬಹಿರಂಗ ಸಭೆಗಳಲ್ಲಿ ಸಿದ್ದರಾಮಯ್ಯನವರು ಬಿಜೆಪಿಗಿಂತಲೂ ಹೆಚ್ಚಾಗಿ ಜೆಡಿಎಸ್ ನಾಯಕರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‍ನಿಂದ ಅಂತರ ಕಾಯ್ದುಕೊಂಡಷ್ಟು ಕಾಂಗ್ರೆಸ್‍ಗೆ ಅನುಕೂಲವಾಗುತ್ತದೆ. ಜೆಡಿಎಸ್‍ನೊಂದಿಗೆ ಸ್ನೇಹವನ್ನು ಮುಂದುವರೆಸಿದ್ದೇಯಾದರೆ ಹಳೇಮೈಸೂರು ಭಾಗದಲ್ಲಿ ರಾಜಕೀಯವಾಗಿ ಅವನತಿ ಕಟ್ಟಿಟ್ಟ ಬುತ್ತಿ ಎಂಬ ಆತಂಕ ಸಿದ್ದರಾಮಯ್ಯ ಅವರ ಬಣವನ್ನು ಕಾಡುತ್ತಿದೆ.

ಆದರೆ ಡಿ.ಕೆ.ಶಿವಕುಮಾರ್ ಅವರು ಇದ್ಯಾವುದನ್ನೂ ಲೆಕ್ಕಕ್ಕೆ ಇಟ್ಟುಕೊಳ್ಳದೆ ಜೆಡಿಎಸ್ ನಾಯಕರು, ಶಾಸಕರು, ಮುಖಂಡರ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಇದು ಜೆಡಿಎಸ್‍ನ್ನು ವಿರೋಧಿಸುವ ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸ್ಪಷ್ಟ ನಿಲುವನ್ನು ಪ್ರದರ್ಶಿಸಲೇಬೇಕು. ಜೆಡಿಎಸ್ ನಾಯಕರು ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಏಕಾಏಕಿ ಬಿಜೆಪಿ ಅಂಗಳಕ್ಕೆ ಕಾಲಿಟ್ಟಂತಿದೆ.

ಜೆಡಿಎಸ್‍ನ ಬಹುತೇಕ ನಾಯಕರು ಅನಿವಾರ್ಯವಾದರೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಸಿದ್ದ ಎಂಬರ್ಥದಲ್ಲಿ ಹೇಳಿಕೆ ನೀಡುತ್ತಿದ್ದಾರೆ.  ಬಿಜೆಪಿ ನಾಯಕರು ಆರಂಭದಲ್ಲಿ ಜೆಡಿಎಸ್‍ನ ಪ್ರಸ್ತಾವನೆಯನ್ನು ತಿರಸ್ಕರಿಸಿದಂತೆ ಕಂಡುಬಂದರೂ ಇತ್ತೀಚೆಗೆ ಮೃದುಧೋರಣೆ ಅನುಸರಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ದೇವೇಗೌಡರು ಮತ್ತು ಅವರ ಕುಟುಂಬದವರನ್ನು ದುಶ್ಯಾಸನ, ಕೌರವ ಎಂದೆಲ್ಲ ವಾಗ್ದಾಳಿ ನಡೆಸಿದ ಯಡಿಯೂರಪ್ಪನವರು ಏಕಾಏಕಿ ದೇವೇಗೌಡರ ಬಗ್ಗೆ ನಮಗೆ ಪ್ರೀತಿ ಇದೆ ಎಂದು ಹೇಳಲಾರಂಭಿಸಿದ್ದಾರೆ.

ಈ ಸಂದರ್ಭದಲ್ಲೂ ಜೆಡಿಎಸ್‍ನ ಸಾಂಗತ್ಯದಲ್ಲಿ ರಾಜಕಾರಣ ಮಾಡುವುದಾದರೆ ಅದು ಅಪಾಯಕಾರಿ ಬೆಳವಣಿಗೆಯಾಗಲಿದೆ ಎಂಬ ಆತಂಕಗಳು ಕೇಳಿಬಂದಿವೆ. ಆದರೆ ಡಿ.ಕೆ.ಶಿವಕುಮಾರ್ ಅವರು ರಾಜಕಾರಣವೇ ಬೇರೆ. ವೈಯಕ್ತಿಕ ಸ್ನೇಹವೇ ಬೇರೆ. ನನ್ನ ಕಷ್ಟ ಕಾಲದಲ್ಲಿ ಜೊತೆಯಲ್ಲಿದ್ದವರಿಗೆ ಕೃತಜ್ಞತೆ ಹೇಳುವುದು ನನ್ನ ಧರ್ಮ ಎಂದು ಸಮರ್ಥಿಸಿಕೊಳ್ಳುತ್ತಾ ಜೆಡಿಎಸ್ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

ನಿನ್ನೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾಗ ಮಾಜಿ ಪ್ರಧಾನಿ ದೇವೇಗೌಡರು ಕೂಡ ಅಲ್ಲಿಗೆ ಬಂದಿದ್ದು, ಇವರಿಬ್ಬರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಸಿದ್ದರಾಮಯ್ಯ ಮತ್ತು ಅವರ ತಂಡ ಬೇರೆ ದಿಕ್ಕಿನಲ್ಲಿ ಪ್ರವಾಸ ಕೈಗೊಂಡು ಜೆಡಿಎಸ್ ಮತ್ತು ಅದರ ನಾಯಕರನ್ನು ಟೀಕಿಸುತ್ತಿದ್ದಾರೆ, ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯನವರ ತವರು ಜಿಲ್ಲೆಗೇ ಹೋಗಿ ಜೆಡಿಎಸ್ ನಾಯಕರನ್ನು ಆಲಂಗಿಸಿಕೊಳ್ಳುತ್ತಿದ್ದಾರೆ. ಇದು ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರಲಿದೆ ಎಂಬ ಕುತೂಹಲ ಕೆರಳಿಸಿದೆ.

 

Facebook Comments