ಡಿಕೆಶಿ ಜೊತೆ ಕೃಷ್ಣಬೈರೇಗೌಡ ರಾಜಕೀಯ ತಂತ್ರಗಾರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಆಂಜನಪ್ಪ ಅವರನ್ನು ಗೆಲ್ಲಿಸಿಕೊಳ್ಳಲೇಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನಾಯಕ ಮಾಜಿ ಸಚಿವ ಶಿವಶಂಕರರೆಡ್ಡಿ, ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನಾಯಕ ಕೃಷ್ಣಬೈರೇಗೌಡ ಅವರೊಂದಿಗೆ ಇಂದು ತಮ್ಮ ಮನೆಯಲ್ಲಿ ಮಹತ್ವದ ಸಭೆ ನಡೆಸಿದ ಡಿ.ಕೆ.ಶಿವಕುಮಾರ್ ಅವರು, ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ನೀಡಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳನ್ನು ಒಗ್ಗೂಡಿಸುವುದು, ಜಾತಿ ಸಮೀಕರಣ, ನಾಯಕರ ಪ್ರಚಾರದ ಕಾರ್ಯಕ್ರಮಗಳ ಪಟ್ಟಿ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಹಳೆ ಮೈಸೂರು ಭಾಗದಲ್ಲಿ ಈ ಎರಡೂ ಕ್ಷೇತ್ರಗಳು ಹೆಚ್ಚು ಸೂಕ್ಷ್ಮವಾಗಿವೆ. ಇಲ್ಲಿ ಕಾಂಗ್ರೆಸ್‍ನ ಅಧಿಪತ್ಯವನ್ನು ಮರು ಸ್ಥಾಪಿಸಬೇಕು. ಪಕ್ಷಕ್ಕೆ ದ್ರೋಹ ಮಾಡಿ ಹೋದವರಿಗೆ ಪಾಠ ಕಲಿಸಬೇಕು.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರನ್ನು ಬೆದರಿಸುವ ಪ್ರಯತ್ನ ಮಾಡಬಹುದು. ಅದಕ್ಕೆ ಹೆದರದಂತೆ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಬೇಕು ಎಂಬ ಕುರಿತು ಈ ಮೂವರು ನಾಯಕರು ಚರ್ಚೆ ಮಾಡಿದ್ದಾರೆ.

ಈ ಮೊದಲು ವಿಧಾನಸಭೆ ಅಧಿವೇಶನದಲ್ಲಿ ಈ ಎರಡೂ ಕ್ಷೇತ್ರಗಳ ಅನರ್ಹ ಶಾಸಕರ ಹೆಸರನ್ನು ಪ್ರಸ್ತಾಪಿಸಿ ಡಿ.ಕೆ.ಶಿವಕುಮಾರ್ ಅವರು ರಣಾಂಗಣದಲ್ಲಿ ಭೇಟಿ ಮಾಡುವುದಾಗಿ ಸವಾಲು ಹಾಕಿದ್ದರು. ಇತ್ತೀಚಿನ ಬೆಳವಣಿಗೆಯಲ್ಲಿ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದ್ದು, ಮೆಡಿಕಲ್ ಕಾಲೇಜು ವಿಚಾರದಲ್ಲಿ ಈ ಇಬ್ಬರ ನಡುವೆ ಮಾತಿನ ಯುದ್ಧವೇ ನಡೆದು ಹೋಗಿದೆ.

ಯಡಿಯೂರಪ್ಪ ಅವರ ಮೂಲಕ ಸುಧಾಕರ್ ಅವರು ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿಸಿಕೊಂಡಿದ್ದಾರೆ. ಇದು ಡಿ.ಕೆ.ಶಿವಕುಮಾರ್ ಅವರ ಕೋಪವನ್ನು ಮತ್ತಷ್ಟು ಕೆರಳಿಸಿದೆ. ಹೀಗಾಗಿ ಇಂದು ಇಬ್ಬರು ಪ್ರಮುಖ ನಾಯಕರ ಜತೆ ನಡೆಸಿದ ಚರ್ಚೆ ಮಹತ್ವದ ಪಡೆದುಕೊಂಡಿದೆ.

Facebook Comments