100 ಸಂಕಟ ಬಂದರೂ ಎದುರಿಸಲು ನಾನ್ ರೆಡಿ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.9- ನನಗೆ ಜಾರಿನಿರ್ದೇಶನಾಲಯ ಯಾವುದೇ ನೋಟಿಸ್ ನೀಡಿಲ್ಲ. ಯಾವುದೇ ಸಂಕಟಗಳು ನನಗೆ ಎದುರಾಗಿಲ್ಲ. ಈಗಾಗಲೇ ಸಾಕಷ್ಟು ಸಂಕಷ್ಟಗಳು ಬಂದು ಹೋಗಿವೆ. ಇನ್ನು ನೂರು ಸಂಕಟಗಳು ಬಂದರೂ ಎದುರಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿನಿರ್ದೇಶನಾಲಯ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.

ನನಗೆ ಯಾವ ನೋಟಿಸೂ ಬಂದಿಲ್ಲ. ದೆಹಲಿಗೆ ಹೋಗಿದ್ದಾಗ ಇಡಿ ಕಚೇರಿಗೆ ಭೇಟಿ ನೀಡಿದ್ದೆ. ಅದನ್ನೇ ಮುಂದಿಟ್ಟುಕೊಂಡು ನೋಟಿಸ್, ಸಮನ್ಸ್ ಬಂದಿದೆ ಎಂದು ಅಪಪ್ರಚಾರ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನಗೆ ಸಾಕಷ್ಟು ಸಂಕಟಗಳು ಬಂದು ಹೋಗಿವೆ. ಡಿನೋಟಿಫಿಕೇಶನ್ ಪ್ರಕರಣವನ್ನು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಬಿಐಗೆ ಪತ್ರ ಬರೆದಿದ್ದಾರೆ.

ಡಿನೋಟಿಫಿಕೇಶನ್ ಪ್ರಕರಣದಲ್ಲಿ ರಾಜ್ಯದ ಅಡ್ವೊಕೇಟ್ ಜನರಲ್ ಅವರು ನೀಡಿರುವ ಅಭಿಪ್ರಾಯಗಳೇನು? ಸಿಬಿಐನ ಕಾಯ್ದೆ ಏನು ಹೇಳುತ್ತದೆ ? ಎಸಿಬಿ ಕಾಯ್ದೆಯಲ್ಲಿ ಏನಿದೆ ಎಂಬುದು ಗೊತ್ತಿದೆ. ಸಿಬಿಐನವರು ನನ್ನ ಮನೆ ಬಾಗಿಲಿಗೆ ಬರಬಹುದು ಎಂದು ನಾನು ಕಾದು ಕುಳಿತಿದ್ದೇನೆ. ಡಿನೋಟಿಫಿಕೇಶನ್ ಪ್ರಕರಣದಲ್ಲಿ ಈಗಾಗಲೇ ಲೋಕಾಯುಕ್ತ, ಎಸಿಬಿಯ ತನಿಖೆ ನಡೆದಿದೆ. ಹೈಕೋರ್ಟ್‍ನಲ್ಲಿ ನನ್ನ ಪರವಾಗಿ ತೀರ್ಪು ಬಂದಿದೆ. ಸುಪ್ರೀಂಕೋರ್ಟ್ನಲ್ಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದವರು ಮೇಲ್ಮನವಿಯನ್ನು ಹಿಂಪಡೆದಿದ್ದಾರೆ ಎಂದರು.

ಆದರೂ ಡಿ.ಕೆ.ಶಿವಕುಮಾರ್‍ಗೆ ಡಿನೋಟಿಫಿಕೇಶನ್ ಸಂಕಟ ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಷ್ಟು ಮಂದಿ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂಬ ಪಟ್ಟಿ ನನ್ನ ಬಳಿ ಇದೆ. ನಾನು ಯಾವುದೇ ಸರ್ಕಾರಿ ಜಮೀನು ಕಬಳಿಸಿಲ್ಲ. ಬಹಳಷ್ಟು ಮಂದಿ ಸರ್ಕಾರಿ ಜಮೀನನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರ ಪಟ್ಟಿಯನ್ನು ಮಾಧ್ಯಮಗಳ ಮುಂದೆ ಪ್ರಕಟಿಸುವುದಿಲ್ಲ. ವಿಧಾನಸಭೆಯಲ್ಲೇ ಹೇಳುತ್ತೇನೆ ಎಂದು ತಿಳಿಸಿದರು.

ಕೆಪಿಸಿಸಿ ಅಥವಾ ವಿರೋಧ ಪಕ್ಷದ ಅಧ್ಯಕ್ಷ ಸ್ಥಾನ ಅಂಗಡಿಯಲ್ಲಿ ಸಿಗುವ ವಸ್ತುವಲ್ಲ. ಅವುಗಳಿಗೆ ಅದರದ್ದೇ ಆದ ಘನತೆ ಇದೆ. ವಿಪಕ್ಷ ಸ್ಥಾನ ಸಾಂವಿಧಾನಿಕ ಹುದ್ದೆ, ಅಧ್ಯಕ್ಷ ಸ್ಥಾನ ಪಕ್ಷದ ಸಾಂವಿಧಾನದಂತೆ ನಡೆಯುವ ಹುದ್ದೆ. ನಾನು ಯಾವುದಕ್ಕೂ ಲಾಬಿ ಮಾಡಿಲ್ಲ. ಅನಗತ್ಯವಾಗಿ ನನ್ನ ಹೆಸರನ್ನು ತಳಕು ಹಾಕಬೇಡಿ ಎಂದು ಮನವಿ ಮಾಡಿದರು.

ನಾನು ಕಾರ್ಯಕರ್ತರ ಜತೆ ಇದ್ದೇನೆ. ರಾಷ್ಟ್ರ ರಾಜಕಾರಣವಾಗಲಿ, ರಾಜ್ಯ ರಾಜಕಾರಣವಾಗಲಿ ತಲೆ ಕೆಡಿಸಿಕೊಂಡಿಲ್ಲ. ಕನಕಪುರದಲ್ಲಿ ಕಲ್ಲು ಹೊಡೆದುಕೊಂಡು, ರೇಷ್ಮೆ, ಕಡ್ಲೆಕಾಯಿ, ಅರಿಶಿಣ ಬೆಳೆ ಬೆಳೆದುಕೊಂಡು ಇದ್ದೇನೆ ಎಂದು ಹೇಳಿದರು. ದಿನಕ್ಕೆ ನೂರಾರು ಮಂದಿಯನ್ನು ಭೇಟಿ ಮಾಡುತ್ತೇನೆ. ಅದೇ ರೀತಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರನ್ನೂ ಭೇಟಿ ಮಾಡಿದ್ದೇನೆ. ಅದಕ್ಕೆಲ್ಲಾ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದರು.

Facebook Comments