ಬಿಜೆಪಿಯಿಂದ ದ್ವೇಷದ ರಾಜಕಾರಣ : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.31- ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪ್ರತಿಪಕ್ಷಗಳ ಶಾಸಕರ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಸದಾಶಿವನಗರದ ತಮ್ಮ ಮನೆಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಹಿಂದಿನ ಸರ್ಕಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಮಂಜೂರಾಗಿದ್ದ ಅನುದಾನ ಮತ್ತು ಯೋಜನೆಗಳನ್ನು ಈಗೀನ ಸರ್ಕಾರ ರದ್ದು ಮಾಡಿದೆ.

ಪ್ರಮಾಣ ವಚನ ಸ್ವೀಕರಿಸುವಾಗ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಬಸವಣ್ಣನ ವಚನ ಉಲ್ಲೇಖಿಸಿ ಹೇಳಿಕೆ ನೀಡಿದ್ದ ಯುಡಿಯೂರಪ್ಪ ಅನಂತರ ಮಾಡುತ್ತಿರುವುದೇಲ್ಲಾ ದ್ವೇಷದ ರಾಜಕಾರಣವನ್ನೇ ಎಂದು ಕಿಡಿಕಾರಿದರು. ಬಿಜೆಪಿ ಶಾಸಕರ ಕ್ಷೇತ್ರಗಳ ಅನುದಾನ ರದ್ದುಗೊಂಡಿಲ್ಲ. ಪ್ರತಿಪಕ್ಷಗಳ ಸದಸ್ಯರ ಕ್ಷೇತ್ರಗಳಿಗೆ ನೀಡಿದ್ದ ಅನುದಾನ ಮಾತ್ರ ಕಡಿತಗೊಂಡಿದೆ.

ಬಿಜೆಪಿಯವರಿಗೆ ಹೆಚ್ಚಿನ ಅನುದಾನ ನೀಡಲು ನಮ್ಮ ಅಭ್ಯಂತರ ಇಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರದಿಂದ ಮತ್ತಷ್ಟು ಅನುದಾನ ತಂದು ಕೊಟ್ಟುಕೊಳ್ಳಲಿ. ಆದರೆ ಹಿಂದಿನ ಅವಧಿಯಲ್ಲಿ ನಮ್ಮ ಶಾಸಕರ ಕಷ್ಟ ಪಟ್ಟು ಪಡೆದುಕೊಂಡ ಅನುದಾನವನ್ನು ರದ್ದು ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದರು.

ವಿಧಾನ ಮಂಡಲದಲ್ಲಿ ರಾಜ್ಯಪಾಲರು ಭಾಷಣ ಮಾಡುವ ಸಂದರ್ಭದಲಿ ಯಾರು ಪ್ರತಿರೋಧಿಸಬಾರದು ಎಂದು ಹೊರಡಿಸಲಾಗಿರುವ ವಿವಾದಿತ ಸುತ್ತೋಲೆಯ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ವಿಧಾನಮಂಡಲವೇನೂ ಸ್ಕೂಲ್ ಅಲ್ಲ, ನಾವು ಅಲ್ಲಿ ಕುಳಿತು ಪಾಠ ಕೇಳಬೇಕಿಲ್ಲ. ನಮಗೂ ರಾಜಕೀಯ ಅನುಭವ ಇದೆ.

ಬಿಜೆಪಿಯವರು ಅಧಿಕಾರಕ್ಕೆ ಬಂದ ಬಳಿಕ ಏನೇಲ್ಲಾ ಮಾಡುತ್ತಿದ್ದಾರೆ ಎಂದು ನೋಡುತ್ತಿದ್ದೇವೆ. ರಾಜ್ಯದಲ್ಲಷ್ಟೇ ಅಲ್ಲ ದೇಶಾದ್ಯಂತ ತಮ್ಮ ಮನಸಿಗೆ ಬಂದಂತೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಹಿಂದೆ ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಿಕೊಳ್ಳಲಿ. ರಾಷ್ಟ್ರಪತಿ ಅವರು ವಿಧಾನಮಂಡಲದಲ್ಲಿ ಭಾಷಣ ಮಾಡಿ ಟಿಪ್ಪು ಸುಲ್ತಾನ್‍ರನ್ನು ಸ್ಮರಿಸಿಕೊಂಡಾಗ ಏನೇಲ್ಲಾ ಟೀಕೆ ಮಾಡಿದ್ದರು ಎಂದು ಗೋತ್ತಿದೆ. ಈಗ ಶಾಸಕರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾದಾನ ವ್ಯಕ್ತ ಪಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಮಾನ, ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದು ಹೋಗುತ್ತಿದೆ. ಒಂದೇ ದೇಶದ ಪ್ರಜೆಗಳ ನಡುವೆ ಭೇದ ಭಾವ ಏಕೆ ಎಂದು ವಿದೇಶಿಗರು ಪ್ರಶ್ನಿಸುತ್ತಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಲು ಹಿಂಜರಿಯುವ ವಾತಾವರಣ ಇದೆ. ಡಾಲರ್ ಮೌಲ್ಯ ಕುಸಿದು ಬಿದ್ದಿದೆ. ಭಾರತದ ಉದ್ಯಮಿಗಳು, ವ್ಯವಹಾರಸ್ಥರು ವಿದೇಶಕ್ಕೆ ತೆರಳಲು ಸಾಲುಗಟ್ಟಿ ನಿಂತಿದ್ದಾರೆ. ನಾನು ಮೊನ್ನೆ ದೆಹಲಿಗೆ ಹೋದಾಗ ಅಮೆರಿಕಾದ ರಾಯಭಾರಿ ಕಚೇರಿ ಮುಂದೆ 5ಸಾವಿರ ಕ್ಕೂ ಮಂದಿ ಅರ್ಜಿ ಹಿಡಿದುಕೊಂಡು ನಿಂತಿದ್ದರು.

ಪ್ರತಿ ನಿತ್ಯ ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಎಷ್ಟು ಮಂದಿ ಈ ರೀತಿ ಹೊರ ಹೋಗಲು ತಯಾರಾಗಿದ್ದಾರೆ ಎಂದು ಸಂಸತ್‍ನಲ್ಲಿ ಪ್ರಶ್ನಿಸಲು ನನ್ನ ಸಹೋದರ ಸಂಸದ ಡಿ.ಕೆ.ಸುರೇಶ್‍ಗೆ ಸಲಹೆ ನೀಡಿದ್ದೇಎ ಎಂದರು.

ಹೋದವರಿಗೆ ಒಳ್ಳೆಯದಾಗಲಿ:
ನಮ್ಮ ಪಕ್ಷದಿಂದ ಕೆಲವು ಶಾಸಕರು ಬಿಜೆಪಿಗೆ ಹೋಗಿದ್ದಾರೆ. ಏನೇನು ಹಾಗಬೇಕು ಎಂದಿಕೊಂಡಿದ್ದರೋ ಅದೆಲ್ಲ ಆಗಲಿ. ಅವರಿಗೆ ಏನೆಲ್ಲಾ ಆಗುತ್ತದೆ ಎಂಬುದನ್ನು ನಾನು ಈ ಮೊದಲು ವಿಧಾನಮಂಡಲದಲ್ಲಿ ಹೇಳಿದ್ದೆ. ಅದೇ ರೀತಿ ನಡೆಯುತ್ತಿದೆ. ಅವರಿಗೆಲ್ಲಾ ಒಳ್ಳೆಯದಾಗಲಿ ಎಂದರು.
ಕಾಂಗ್ರೆಸ್‍ನಲ್ಲಿ ನಾಯಕತ್ವದ ಗೊಂದಲ ಇಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದರು.

Facebook Comments