ಕೆಪಿಸಿಸಿ ಅಧ್ಯಕ್ಷರ ಶೀಘ್ರ ನೇಮಕಕ್ಕೆ ಡಿಕೆಶಿ ಒತ್ತಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.15-ಖಾಲಿ ಉಳಿದಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ನೇಮಕ ಮಾಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ತರಲು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ದಿನೇಶ್‍ಗುಂಡೂರಾವ್ ಮತ್ತು ಸಿದ್ದರಾಮಯ್ಯ ಅವರ ರಾಜೀನಾಮೆಯಿಂದಾಗಿ ಕರ್ನಾಟಕ ಕಾಂಗ್ರೆಸ್‍ನಲ್ಲಿ ಅಧಿಕೃತ ನಾಯಕತ್ವವಿಲ್ಲದಂತಾಗಿದೆ.

ತಕ್ಷಣವೇ ರಾಜೀನಾಮೆ ಕುರಿತು ನಿರ್ಧಾರ ಪ್ರಕಟಣೆ ಮಾಡಿ ಒಂದು ವೇಳೆ ರಾಜೀನಾಮೆಗಳು ಅಂಗೀಕಾರವಾದರೆ ಆ ಸ್ಥಾನಗಳಿಗೆ ಬೇರೆ ನಾಯಕರನ್ನು ನೇಮಿಸಿ. ಇಲ್ಲವಾದರೆ ಅವರನ್ನೇ ಮುಂದುವರೆಸುವುದಾದರೆ ಅದನ್ನೇ ಬಹಿರಂಗವಾಗಿ ಹೇಳಿ ಎಂದು ಡಿ.ಕೆ.ಶಿವಕುಮಾರ್ ಒತ್ತಡ ತಂದಿದ್ದಾರೆ.

ಸೋಮವಾರದಿಂದ ವಿಧಾನಮಂಡಲದ ಅಧಿವೇಶನ ಆರಂಭಗೊಳ್ಳುತ್ತಿದೆ. ವಿರೋಧ ಪಕ್ಷದ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಅದು ಅಂಗೀಕಾರವಾಗಿದೆಯೋ ಇಲ್ಲವೋ ಎಂಬುದು ಗೊತ್ತಿಲ್ಲದಿರುವುದರಿಂದ ಗೊಂದಲಗಳಿವೆ. ವಿಧಾನಸಭೆಯಲ್ಲಿ ಸರ್ಕಾರವನ್ನು ನಾವು ಪ್ರಶ್ನಿಸಲು ಮುಂದಾದರೆ ನಿಮ್ಮಲ್ಲಿ ವಿರೋಧ ಪಕ್ಷದ ನಾಯಕರು ಯಾರು ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ ನೀಡಲು ನಮಗೆ ಮುಜುಗರವಾಗುವ ಸನ್ನಿವೇಶ ಇದೆ.

ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಸಂತೋಷ. ಆದರೆನಿರ್ಧಾರವನ್ನು ಮಾತ್ರ ತಕ್ಷಣ ಪ್ರಕಟಣೆ ಮಾಡಿ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಿಜೆಪಿ ಸರ್ಕಾರ ನಿರಂತರವಾಗಿ ವೈಫಲ್ಯಗಳನ್ನು ಅನುಭವಿಸುತ್ತಾ ಬಂದಿದೆ. ಅದರ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಬೇಕಾಗಿದೆ. ಈ ಎರಡೂ ಹುದ್ದೆಗಳು ಅತ್ಯಂತ ಜವಾಬ್ದಾರಿಯುತ ಸ್ಥಾನಗಳು. ಸದನದ ಒಳಗೆ ಹೋರಾಟ ಮಾಡಲು ವಿಪಕ್ಷ ನಾಯಕರಿಲ್ಲ. ಸದನದ ಹೊರಗೆ ಹೋರಾಟ ಮಾಡಲು ಕೆಪಿಸಿಸಿ ಅಧ್ಯಕ್ಷರಿಲ್ಲ ಎಂಬ ಅಸಮಾಧಾನ ಕಾರ್ಯಕರ್ತರಲ್ಲಿದೆ.

ರಾಜೀನಾಮೆಗಳು ಅಂಗೀಕಾರಗೊಂಡಿಲ್ಲ. ಹಾಗಾಗಿ ಸದ್ಯಕ್ಕೆ ಅವರೇ ಮುಂದುವರೆದಿದ್ದಾರೆ ಎಂದು ಸಮರ್ಥಿಸಿಕೊಳ್ಳುವುದು ಹಾಸ್ಯಾಸ್ಪದವಾಗುತ್ತದೆ. ಕಳೆದ ಮೂರು ತಿಂಗಳಿನಿಂದಲೂ ನೆನೆಗುದಿಗೆ ಬಿದ್ದಿರುವ ರಾಜೀನಾಮೆಗಳ ಬಗ್ಗೆ ಸೋಮವಾರದೊಳಗೆ ನಿರ್ಧಾರ ಪ್ರಕಟಿಸಬೇಕು ಎಂದು ಒತ್ತಡ ತಂದಿದ್ದಾರೆ. ಕೆಪಿಸಿಸಿ ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಿ. ನಮ್ಮ ವಿರೋಧವಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಆದರೆ ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಿ. ನನಗಾಗಿ ನಾನು ಎಂದೂ ಲಾಬಿ ಮಾಡಿಲ್ಲ. ಪಕ್ಷದ ಹಿತದೃಷ್ಟಿಯಿಂದಲೇ ಕೆಲಸ ಮಾಡುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಸಮರ್ಥನೆಯನ್ನು ಮುಂದಿಟ್ಟಿದ್ದಾರೆ.

ರಾಜ್ಯದ ಕೆಲ ನಾಯಕರು ಹೈಕಮಾಂಡ್‍ನವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ರಾಜ್ಯದ ಯಾವ ನಾಯಕರನ್ನೂ ಭೇಟಿ ಮಾಡಲು ವರಿಷ್ಠರು ಅನುಮತಿ ನೀಡಿಲ್ಲ. ಡಿ.ಕೆ.ಶಿವಕುಮಾರ್ ಅವರು ಕೂಡ ಯಾವುದೇ ಪೂರ್ವಾನುಮತಿ ಪಡೆದು ಹೋಗಿಲ್ಲ. ಬದಲಾಗಿ ನೇರವಾಗಿ ದೆಹಲಿಗೆ ತೆರಳಿ ಸಮಯ ಸಿಕ್ಕಾಗ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ.

Facebook Comments