ಕೆಪಿಸಿಸಿಯಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಅಖಾಡಕ್ಕಿಳಿದ ಟ್ರಬಲ್ ಶೂಟರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.15-ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್‍ನ ಪ್ರತಿಯೊಬ್ಬ ಪ್ರಮುಖ ನಾಯಕರನ್ನು ಭೇಟಿ ಮಾಡುವ ಮೂಲಕ ಪಕ್ಷದಲ್ಲಿ ಒಗ್ಗಟ್ಟನ್ನು ಮರುಸ್ಥಾಪಿಸುವ ಕಾರ್ಯಕ್ಕಿಳಿದಿದ್ದಾರೆ.  ರಾಜ್ಯ ಕಾಂಗ್ರೆಸ್‍ನಲ್ಲಿ ಪಕ್ಷವನ್ನು ಸೋಲಿಸಲು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂಬ ಮಾತಿದೆ. ಹಲವಾರು ವರ್ಷಗಳಿಂದಲೂ ಇದೇ ರೀತಿ ಒಳಜಗಳಗಳಿಂದಲೇ ಕಾಂಗ್ರೆಸ್ ಹಲವಾರು ಬಾರಿ ಸೋಲುತ್ತಾ ಬಂದಿದೆ.

ಅಧಿಕಾರಕ್ಕಾಗಿ ಪರಸ್ಪರ ಕಾಲೆಳೆಯುವುದು, ಹಗೆತನ ಸಾಧಿಸುವುದು ಕಾಂಗ್ರೆಸ್‍ನ ಹುಟ್ಟು ಚಾಳಿಯಾಗಿದೆ. ಈವರೆಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳ ನಡುವೆ ಮಾತ್ರ ಪ್ರಬಲ ಪೈಪೋಟಿ ಇತ್ತು. ಈ ಎರಡು ಪಕ್ಷಗಳ ನಡುವಿನ ಸೈದ್ದಾಂತಿಕ ಸಂಘರ್ಷಗಳು ಸೋಲುಗೆಲುವಿನ ಮೇಲಾಟಗಳು ಪದೇ ಪದೇ ನಡೆಯುತ್ತಿದ್ದರೂ ಅಪಾಯಕಾರಿ ಸನ್ನಿವೇಶವನ್ನೇನೂ ತಂದೊಡ್ಡಿರಲಿಲ್ಲ.

ಒಮ್ಮೆ ಸೋಲು ಕಂಡರೂ ಮತ್ತೊಮ್ಮೆ ಗೆಲ್ಲುವಂತಹ ವಿಶ್ವಾಸ ಕಾಂಗ್ರೆಸ್‍ನಲ್ಲಿತ್ತು. 2006ರಿಂದೀಚೆಗೆ ಕಾಂಗ್ರೆಸ್‍ಗೆ ವೈಚಾರಿಕವಾದ ಪೈಪೋಟಿ ಎದುರಾಗಿದೆ. ಬಿಜೆಪಿ ತಂದೊಡ್ಡುತ್ತಿರುವ ಸವಾಲುಗಳು ಕಾಂಗ್ರೆಸ್‍ನ್ನು ಬಗ್ಗುಬಡಿದು ಹಾಕಿದೆ.  ಬಿಜೆಪಿ ನಡೆಸುತ್ತಿರುವ ಭಾವನಾತ್ಮಕ ರಾಜಕೀಯಕ್ಕೆ ಪ್ರತಿ ಸವಾಲು ಹಾಕಲು ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಜನತಾದಳ, ಜೆಡಿಎಸ್‍ಗಿಂತಲೂ ಕಾಂಗ್ರೆಸ್ ನಾಯಕರು ಬಿಜೆಪಿ ಕಂಡು ಪರಗುಟ್ಟುತ್ತಿದ್ದಾರೆ.

ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದ ಬಳಿಕ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಶುರುವಾಗಿದೆ. ಆಧುನಿಕ ಯುಗದಲ್ಲಿ ಎದುರಾಗುವ ಹೊಸ ಸವಾಲುಗಳಿಗೆ ಶೀಘ್ರವಾಗಿ ಸ್ಪಂದಿಸುವ ಡಿ.ಕೆ.ಶಿವಕುಮಾರ್ ಅವರು ಪ್ರತಿ ಸವಾಲಿನ ಪರಿಸ್ಥಿತಿ ಸೃಷ್ಟಿಸುವ ರಾಜ ತಾಂತ್ರಿಕತೆಯಲ್ಲಿ ನಿಪುಣರು.  ಬಿಜೆಪಿ ಈಗ ಹುಟ್ಟು ಹಾಕಿರುವ ಭಾವನಾತ್ಮಕ ರಾಜಕೀಯಕ್ಕೆ ಡಿಕೆಶಿ ಬಳಿ ಮದ್ದು ಸಿಗಬಹುದು ಎಂಬ ನಿರೀಕ್ಷೆಗಳಿವೆ. ಅದಕ್ಕಿಂತಲೂ ಮೊದಲು ಕಾಂಗ್ರೆಸ್‍ನಲ್ಲೇ ಇರುವಂತಹ ಒಳಜಗಳಗಳನ್ನು ನಿಯಂತ್ರಿಸದಿದ್ದರೆ ಪ್ರತಿಸ್ಪರ್ಧಿ ವಿರುದ್ದ ರಚನೆ ಮಾಡುವ ಎಲ್ಲ ವ್ಯೂಹಗಳು ವಿಫಲಗೊಳ್ಳುತ್ತವೆ.

ಹಾಗಾಗಿ ಡಿ.ಕೆ.ಶಿವಕುಮಾರ್ ನಿನ್ನೆಯಿಂದಲೂ ಹಿರಿಯ ನಾಯಕರ ಮನೆಗಳಿಗೆ ಎಡೆತಾಕುತ್ತಿದ್ದಾರೆ. ಅಧಿಕಾರ ವಹಿಸಿಕೊಳ್ಳುವ ಮುನ್ನ ಪ್ರತಿಯೊಬ್ಬ ನಾಯಕರನ್ನು ಭೇಟಿ ಮಾಡಿ ಸಹಕಾರ ಯಾಚನೆ ಮಾಡುತ್ತಿದ್ದಾರೆ.  ಇಂದು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ಅವರ ಮನೆಗೆ ಭೇಟಿ ನೀಡಿದ್ದು, ನಂತರ ಕನಕಪುರ ಕ್ಷೇತ್ರಕ್ಕೆ ತೆರಳಿ ತಮ್ಮ ಮನೆಯಲ್ಲಿ ಕ್ಷೇತ್ರದ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದಾರೆ.

ಪಕ್ಷದಲ್ಲಿ ಒಗ್ಗಟ್ಟು ಮೂಡಿದರೆ ಎಲ್ಲ ನಾಯಕರು ಸಹಕಾರ ಕೊಟ್ಟರೆ ಮಾತ್ರ ಬಿಜೆಪಿಯ ಸವಾಲನ್ನು ಮೆಟ್ಟಿ ನಿಂತು ಮುಂದಿನ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಾಗುತ್ತದೆ. ಇಲ್ಲವಾದರೆ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿಯೂ ಸೋಲು ಕಾಣಬೇಕಾಗುತ್ತದೆ.

Facebook Comments