ವಿದ್ಯುತ್ ತಿದ್ದುಪಡಿ ಕಾಯ್ದೆಗೆ ಡಿಕೆಶಿ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27- ವಿದ್ಯುತ್ ತಿದ್ದುಪಡಿ ಕಾಯ್ದೆ ಬಗ್ಗೆ ತೀವ್ರ ಅಸಮಾ ಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಪಕ್ಷದ ಹಿರಿಯ ನಾಯಕರ ಜತೆ ಚರ್ಚೆ ಮಾಡಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಗಳನ್ನು ಸಿದ್ದಪಡಿಸುವುದಾಗಿ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಪಂಡಿತ್ ಜವಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಮನಸೋಇಚ್ಚೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ಅವರು ಮಾಡುವ ಎಲ್ಲಾ ಚಟುವಟಿಕೆಗಳನ್ನು ನಾವು ಗಮನಿಸುತ್ತಿದ್ದೇವೆ. ಯಾವುದಕ್ಕೂ ನಮ್ಮ ಅಭಿಪ್ರಾಯ ಕೇಳಲಿಲ್ಲ. ಏನು ಮಾಡ್ತಾರೋ ಮಾಡಲಿ, ವಿರೋಧ ಪಕ್ಷವಾಗಿ ನಾವೂ ಕೂಡ ಸಭೆ ಮಾಡಿ ಚರ್ಚಿಸುತ್ತೇವೆ. ಮುಂದೆ ಯಾವ ರೀತಿಯ ನಿಲುವು ತಾಳಬೇಕು ಎಂಬುದರ ಬಗ್ಗೆ ಶೀಘ್ರವಾಗಿ ತಿಳಿಸುತ್ತೇವೆ ಎಂದರು.

ರಾಜ್ಯದಲ್ಲಿ ದೇವಸ್ಥಾನಗಳನ್ನು ತೆರೆಯುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತಿದೆ. ಅದರಿಂದಾಗುವ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಬೇಕು. ಈ ಮೊದಲು ರೈತರು ಹಾಗೂ ಕಾರ್ಮಿಕರನ್ನು ಹೇಗೆಲ್ಲಾ ನಡೆಸಿಕೊಂಡರು ಎಂಬುದು ಗೊತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಲಾಕ್‍ಡೌನ್ ಆಗಿ 60 ದಿನ ಕಳೆದಿದೆ. ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಸೋಂಕು ನಿಯಂತ್ರಿಸುವುದರಲ್ಲಿ ಬೆಂಗಳೂರು ಮಾದರಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಇಲ್ಲಿನ ವಾತಾವರಣ ಹಾಗೂ ಉತ್ತಮ ಸೌಲಭ್ಯಗಳು ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಿವೆ.

ಗುಜರಾತನ್ನು ಮಾದಾರಿ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು. ಜೂ.1 ರಿಂದ ದೇವಸ್ಥಾನಗಳನ್ನು ತೆರೆಯುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ದೇವಸ್ಥಾನ, ಚರ್ಚೆಗಳು, ಮಸೀದಿಗಳನ್ನು ಓಪನ್ ಮಾಡುವುದು ತಪ್ಪಲ್ಲ. ಆದರೆ, ಹಣಕ್ಕಾಗಿ ಇವುಗಳನ್ನು ತೆರೆಯಬಾರದು. ಎಲ್ಲೆಲ್ಲಿ ಹಣ ಸಿಗುತ್ತದೆ ಅಲ್ಲೆಲ್ಲಾ ಲಾಕ್‍ಡೌನ್ ಸಡಿಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕಾರ್ಮಿಕರು, ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಹೋಟೆಲ್, ರೆಸ್ಟೋರೆಂಟ್‍ಗಳನ್ನು ಕೂಡ ಸರ್ಕಾರ ತೆರೆಯಲು ಅನುಮತಿ ಕೊಡಲಿ ಎಂದು ಸಲಹೆ ನೀಡಿದರು.

Facebook Comments