ಡಿಕೆಶಿ ಪದಗ್ರಹಣಕ್ಕೆ ಅನುಮತಿ ಕೋರಿ ಮತ್ತೆ ಸಿಎಂಗೆ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.10- ಕೆಪಿಸಿಸಿ ಅಧ್ಯಕ್ಷರಾಗಿ ತಾವು ಪದಗ್ರಹಣ ಮಾಡುವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿರುವುದು ರಾಜಕೀಯ ದಾಖಲೆಯಾಗಲಿದೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅನುಮತಿಗಾಗಿ ಮತ್ತೆ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಜ್ಞಾವಿಧಿ ಸ್ವೀಕಾರ ಪಠಣ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಸರ್ಕಾರ ಅನುಮತಿ ಕೊಟ್ಟ ನಂತರವೇ ಕಾರ್ಯಕ್ರಮ ಮಾಡುತ್ತೇವೆ.

ಕಾನೂನು ಮೀರುವುದಿಲ್ಲ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಶಾಸಕಾಂಗ ಪಕ್ಷದ ಸಭೆಗೂ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು. ಮಾರ್ಚ್ 12ರಂದು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಕ್ಷಣದಿಂದ ಒಂದ ನಿಮಿಷ ವ್ಯಯ ಮಾಡದೇ ಕೆಲಸ ಮಾಡುತ್ತಿದ್ದೇನೆ ಎಂದರು.  ಸಾಂಪ್ರದಾಯಿಕವಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ನಡೆಯಬೇಕಿತ್ತು.

ಆ ಕಾರ್ಯಕ್ರಮಕ್ಕೆ ಅನೇಕ ಅಡ್ಡಿ ಬರುತ್ತಿವೆ. ಮೂರು ಬಾರಿ ದಿನಾಂಕ ನಿಗದಿ ಮಾಡಿ ಮುಂದೂಡಿಕೆಯಾಗಿದೆ. ಮೇ 31, ಜೂ 7, ಅನಂತರ ಜೂ.14 ದಿನಾಂಕ ನಿಗದಿಯಾಗಿತ್ತು. ಇದಕ್ಕೆ ಪೊಲೀಸ್ ಆಯುಕ್ತರ ಮಕಿಕ ಅನುಮತಿಯೂ ಪಡೆಯಲಾಗಿತ್ತು.

7800 ಕಡೆ ಜಗ ನಿಗದ ಪಡಿಸಲಾಗಿತ್ತು,  ಹೆಚ್ಚುವರಿಯಾಗಿ ಮೂರುವರೆ ಸಾವಿರ ಜಗದಲ್ಲಿ ಎಲ್ ಇ ಡಿ ಸ್ಕ್ರೀನ್ ಹಾಕಿ ಒಂದುವರೆ ತಿಂಗಳಿನಿಂದ ತಯಾರಿ ನಡೆಸಿದ್ದೆವು. ಆದರೆ ಸರ್ಕಾರ ಅನುಮತಿ ನಿರಾಕರಿಸಿದೆ. ಅನುಮತಿ ಕೇಳಿ ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಪತ್ರ ಬರೆದು, ಯಾವ ರೀತಿ ಕಾರ್ಯಕ್ರಮ ನಡೆಯಲಿದೆ ಎಂದು ವಿವರ ನೀಡಲಾಗಿತ್ತು.

ಕೆಪಿಸಿಸಿ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪೆಂಡಾಲ್ ಹಾಕಿ, ನೂರೈವತ್ತು ಜನ ಭಾಗವಹಿಸುವವರಿದ್ದರು. ಅದಕ್ಕೂ ಅನುಮತಿ ನಿರಾಕರಿಸಲಾಗಿದೆ. ಸಿಎಂ ಯಡಿಯೂರಪ್ಪ ನುಡಿದಂತೆ ನಡೆಯುತ್ತಾರೆ, ಸಣ್ಣ ರಾಜಕಾರಣ ಮಾಡಲ್ಲ ಎಂದುಕೊಂಡಿದ್ದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಸಚಿವರು ಹೋದ ಕಡೆಯಲೆಲ್ಲಾ ಯಾವ ರೀತಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಗೊತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಪಶ್ಚಿಮ ಬಂಗಾಳ, ಬಿಹಾರದಲ್ಲಿ ಅಲ್ಲಿನ ಬಿಜೆಪಿ ನಾಯಕರು ಮೇಗಾ ರ್ಯಾಲಿ ನಡೆಸಿದ್ದಾರೆ. ಬಿಹಾರದಲ್ಲಿ ಎಪ್ಪತ್ತು ಸಾವಿರ ಎಲ್‍ಇ ಹಾಕಿ ಕಾರ್ಯಕ್ರಮ ಮಾಡಿದ್ದಾರೆ. ಅವರಿಗೊಂದು, ನಮಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಮಾಧ್ಯಮ ಘಟಕದ ಅಧ್ಯಕ್ಷ ವಿ.ಎಸ್.ಉಗ್ರಪ್ಪ, ನಾಯಕರಾದ ಬಿ.ಎಲ್.ಶಂಕರ್, ವಿ.ಆರ್. ಸುದರ್ಶನ್, ಷಫಿ, ಎಂ ಎಲ್ ಸಿ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Facebook Comments