ಮತ್ತೆ ಸಿಬಿಐ ಸಂಕಷ್ಟಕ್ಕೆ ಸಿಲುಕಿದ ಕೆಪಿಸಿಸಿ ಬಾಸ್ ಡಿಕೆಶಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.22- ಹಣಕಾಸು ಅಕ್ರಮ ಪ್ರಕರಣದಲ್ಲಿ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಾಳಿಗೆ ಒಳಗಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಮತ್ತೆ ಸಿಬಿಐ ಸಂಕಷ್ಟ ಎದುರಾಗಿದೆ.

ಏಕೆಂದರೆ ತಮ್ಮ ವಿರುದ್ಧ ರಾಜ್ಯಸರ್ಕಾರ ಸಿಬಿಐ ತನಿಖೆ ನಡೆಸಲು ಆದೇಶಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಹೈಕೋರ್ಟ್‍ನ ಏಕಸದಸ್ಯ ಪೀಠ ವಜಾಗೊಳಿಸಿದೆ. ಇದರಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ಯಾವುದೇ ಸಂದರ್ಭದಲ್ಲಿ ಪುನಃ ದೂರು ದಾಖಲಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಡಿ.ಕೆ.ಶಿವಕುಮಾರ್ ಆಪ್ತ ಶಿವಣ್ಣ ಎಂಬುವರು ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‍ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಆರ್.ನಟರಾಜ್ ಅವರು ಈ ಮೇಲ್ಮನವಿಯನ್ನು ವಜಾಗೊಳಿಸಿದ್ದಾರೆ.

ಡಿ.ಕೆ.ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ದೂರು ದಾಖಲಿಸಲಾಗಿದೆ. ಪ್ರಕರಣ ಕುರಿತು ಇನ್ನಷ್ಟು ತನಿಖೆಯ ಅಗತ್ಯವಿದೆ. ಇದರಲ್ಲಿ ಭಾರೀ ಪ್ರಮಾಣದ ಹಣದ ವಹಿವಾಟು ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವಕೀಲ ಪ್ರಸನ್ನಕುಮಾರ್ ವಾದ ಮಂಡಿಸಿದರು.

ಐಟಿ ಮತ್ತು ಜಾರಿ ನಿರ್ದೇಶನಾಲಯ(ಇಡಿ) ಜಂಟಿಯಾಗಿ ತನಿಖೆ ನಡೆಸಿದೆ. ಶಿವಕುಮಾರ್ ಅವರ ಕುಟುಂಬದವರು, ಆಪ್ತ ವಲಯ ಮತ್ತು ದೆಹಲಿಯಲ್ಲಿ ದಾಳಿ ನಡೆಸಿದ ವೇಳೆ ಕಾನೂನು ಬಾಹಿರವಾಗಿ ಹಣದ ವಹಿವಾಟು ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಈಗಾಗಲೇ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶ ಕೊಟ್ಟಿದೆ. ತನಿಖೆ ನಡೆಸಲು ಸರ್ಕಾರದ ಅನುಮತಿ ಅಗತ್ಯವಿದೆ. ಇದು ಬಹುದೊಡ್ಡ ಪ್ರಕರಣವಾಗಿರುವುದರಿಂದ ಸಿಬಿಐ ತನಿಖೆ ಅಗತ್ಯವಿದೆ.

ಹೀಗಾಗಿ ಅರ್ಜಿದಾರರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಬಾರದೆಂದು ಸಿಬಿಐ ಪರ ವಕೀಲರು ಮನವಿ ಮಾಡಿದರು.ಇದನ್ನು ಮಾನ್ಯ ಮಾಡಿದ ನ್ಯಾಯಾಲಯ ಶಿವಣ್ಣ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.

ರಾಜ್ಯ ಸರ್ಕಾರದ ಪರವಾಗಿ ಅಡ್ವಕೇಟ್ ಜನರಲ್ ಪ್ರಭುಲಿಂಗ್ ನಾವಡಗಿ ವಾದ ಮಂಡಿಸಿ ಈಗಾಗಲೇ ಗೃಹ ಇಲಾಖೆ ಮೂಲಕವೇ ಸಿಬಿಐ ತನಿಖೆಗೆ ಸರ್ಕಾರ ಅನುಮತಿ ಕೊಟ್ಟಿದೆ. ಅರ್ಜಿದಾರರ ವಿರುದ್ಧ ತನಿಖೆ ನಡೆಸಲು ಅಭ್ಯಂತರವಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಅಂತಿಮವಾಗಿ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಇದೀಗ ಸಿಬಿಐ ಯಾವುದೇ ಕ್ಷಣದಲ್ಲಿ ಎಫ್‍ಐಆರ್ ದಾಖಲೆ ಸಾಧ್ಯತೆ ಇದೆ.ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ನಡೆಸಲು ರಾಜ್ಯ ಸರಕಾರ ಈಗಾಗಲೇ ಒಪ್ಪಿಗೆ ಸೂಚಿಸಿದೆ.

ಅದೇ ದಾಖಲೆಗಳನ್ನು ಇಟ್ಟುಕೊಂಡು ಸಿಬಿಐ ಕೂಡ ತನಿಖೆ ನಡೆಸಲಿದೆ. ಶಿವಕುಮಾರ್ ಹೊಂದಿರುವ ಆಸ್ತಿಯನ್ನು ಯಾವ ಮೂಲಗಳಿಂದ ಸಂಪಾದಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ವ್ಯವಹಾರ, ತೆರಿಗೆ ಪಾವತಿ, ಮಾಡಿರುವ ಖರ್ಚುಗಳು, ತಮ್ಮ ವೇತನ ಹಾಗೂ ಕುಟುಂಬ ಸದಸ್ಯರ ಆದಾಯದಿಂದ ಗಳಿಸಿರುವ ಕುರಿತು ಸಮಗ್ರ ಮಾಹಿತಿ ಕೊಡಬೇಕಾಗುತ್ತದೆ.

ಈ ಸಂಬಂಧ ಸಿಬಿಐ ಮುಂದೆ ಡಿಕೆಶಿ ಹಾಗೂ ಅವರ ಕುಟುಂಬ ಸದಸ್ಯರು ಹಾಜರಾಗಿ ವಿಚಾರಣೆ ಎದುರಿಸಬೇಕಾಗುತ್ತದೆ. ಶಿವಕುಮಾರ್ ಅಧಿಕೃತ ಮೂಲಗಳಿಂದ ಸಂಪಾದಿಸಿರುವ ಆದಾಯ ಮತ್ತು ಅವರ ಬಳಿ ಇರುವ ಆಸ್ತಿ ಮತ್ತು ನಗದು, ಚಿನ್ನಾಭರಣದ ಕುರಿತು ಹೋಲಿಕೆಯನ್ನು ಮಾಡಲಾಗುತ್ತದೆ.

2017ರ ಆಗಸ್ಟ್ ತಿಂಗಳಲ್ಲಿಡಿಕೆಶಿ ಮತ್ತು ಆವರ ಆಪ್ತರ ನಿವಾಸ, ಕಚೇರಿಗಳ ಮೇಲೆ ದಾಳಿ, ತೆರಿಗೆ ವಂಚನೆ ಆರೋಪ ಸಂಬಂಧ ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ಪ್ರಕರಣದ ವಿಚಾರಣೆಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದಿದೆ.

ಈ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಜೊತೆಗೆ ಆಪ್ತರಾದ ಸಚಿನ್ ನಾರಾಯಣ, ಸುನೀಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ಎನ್.ರಾಜೇಂದ್ರ ಆರೋಪಿಗಳಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಅವರು ನಾಮಪತ್ರದ ಜೊತೆಗೆ 840 ಕೋಟಿ ಆಸ್ತಿ ಹೊಂದಿರುವ ಬಗ್ಗೆ ದಾಖಲೆ ಸಲ್ಲಿಸಿದ್ದರು. ಹೀಗಾಗಿ ಈ 840 ಕೋಟಿ ಹಣ ಸಂಪಾದನೆಯ ಹಿಂದಿನ ರಹಸ್ಯ ಬಯಲಿಗೆ ಎಳೆಯಲು ಸಿಬಿಐ ಮುಂದಾಗಿದೆ.

ಈ ಕುರಿತು ಸಿಬಿಐ ಅಧಿಕಾರಿಗಳು ಈಗಾಗಲೇ 1988 ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಡಿಕೆಶಿ ವಿರುದ್ಧ ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಕೆಶಿ ಅವರ 840 ಕೋಟಿ ಆಸ್ತಿಯ ಹೇಗೆ ಸಂಪಾದನೆ ಮಾಡಲಾಯಿತು? ಎಂಬ ಮೂಲಕ್ಕೆ ಕೈ ಹಾಕಿರುವ ಸಿಬಿಐ ಅಧಿಕಾರಿಗಳು ಈಗಾಗಲೇ ಅವರ ವಿರುದ್ಧ ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಅನುಮತಿ ನೀಡಿದ ಈ ಪ್ರಕರಣಗಳ ವಿಚಾರಣೆ ಸಾಧ್ಯವಿಲ್ಲ.

ಆದರೆ, ಇದೀಗ ಭ್ರಷ್ಟಾಚಾರ ಕುರಿತು ಪ್ರಕರಣದ ವಿಚಾರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಸಿಬಿಐ ಅಧಿಕಾರಿಗಳು ಮೊದಲು ಡಿಕೆಶಿ ವಿರುದ್ಧ ಮೊದಲು ಎಫ್‍ಐಆರ್ ದಾಖಲಿಸಲಿದೆ. ಬಳಿಕ ಅವರನ್ನು ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ಪಡೆಯಲು ಅಗತ್ಯವಾದ ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಕಲೆಹಾಕಲಿದೆ.

ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಇಡಿ ಅಧಿಕಾರಿಗಳು ಈಗಾಗಲೇ ಡಿಕೆಶಿ ಮಾಡಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಕುರಿತ ಮಹತ್ವದ ದಾಖಲೆಗಳನ್ನು ಸಿಬಿಐ ಅಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

Facebook Comments

Sri Raghav

Admin