ಕೊರೋನಾದಿಂದ ಸಾವನ್ನಪ್ಪಿದವರ ಕುಟುಂಬಗಳ ನೋವಿಗೆ ಸ್ಪಂದಿಸಿ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.1- ರಾಜ್ಯದಲ್ಲಿ 3.27 ಲಕ್ಷ ಮಂದಿ ಸಾವನ್ನಪ್ಪಿರುವುದಾಗಿ ಸರ್ಕಾರದ ವೆಬ್ ಸೈಟ್‍ನಲ್ಲೇ ಮಾಹಿತಿ ಪ್ರಕಟಿಸಲಾಗಿದೆ. ಆದರೆ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೇಟಿನ್ ನಲ್ಲಿ ಕೋವಿಡ್‍ನಿಂದ 31.37 ಸಾವಿರ ಜನ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಲೆಕ್ಕ ತೋರಿಸಲಾಗುತ್ತಿದೆ.

ಸಾವಿನ ಪ್ರಕರಣದಲ್ಲಿ ಸಹಾನುಭೂತಿಯಿಂದ ವರ್ತಿಸಬೇಕು ಮತ್ತು ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೃತಪಟ್ಟವರಿಗೆ ಮರಣ ಪ್ರಮಾಣ ಪತ್ರ ಕೊಡಲು ಸಿದ್ಧವಿಲ್ಲ. ಇನ್ನೂ ಕೆಲವರಿಗೆ ಪ್ರಮಾಣ ಪತ್ರದಲ್ಲಿ ಸಹಜ ಸಾವು ಎಂದು ನಮೂದಿಸಲಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಮೃತ ಪಟ್ಟವರ ಕುಟುಂಬಕ್ಕೆ ಒಂದು ಲಕ್ಷ ಕೊಡುವುದಾಗಿ ಹೇಳಿದೆ. ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಪರಿಹಾರಕ್ಕೆ ಸೂಚನೆ ನೀಡುವ ಸಾಧ್ಯತೆ ಇದೆ. ಸಾವಿಗೆ ಕೋವಿಡ್ ಕಾರಣ ಎಂದು ಪ್ರಮಾಣ ಪತ್ರ ನೀಡದೆ ಇದ್ದರೆ ಪರಿಹಾರ ಪಡೆಯುವುದು ಹೇಗೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸರ್ಕಾರ ಅವರೆಲ್ಲರಿಗೂ ಪರಿಹಾರ ಕೊಡಬೇಕಿದೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಜನರಿಗೆ ಸರ್ಕಾರದ ಸೌಲಭ್ಯ ಕೊಡಿಸಲು ಪ್ರಯತ್ನ ಮಾಡುತ್ತೇವೆ ಎಂದರು. ಚಾಮರಾಜನಗರ ಜಿಲ್ಲೆಯ ಆಕ್ಸಿಜನ್ ದುರಂತ ಆಕಸ್ಮಿಕವಲ್ಲ, ಸರ್ಕಾರದ ನಿರ್ಲಕ್ಷ್ಯದಿಂದ ನಡೆದ ಕೊಲೆ. ಆಕ್ಸಿಜನ ಕೊರತೆಯಾಗಲಿದೆ ಎಂದು ಅಧಿಕಾರಿಗಳಿಗೆ ಮೊದಲೇ ಗೋತ್ತಿತ್ತು. ಅಲ್ಲಿನ ವೈದ್ಯಕೀಯ ಸಿಬ್ಬಂದಿ ದಿನಾ ಸಾಯುವವರಿಗೆ ಅಳುವರ್ಯಾರು ಎಂದು ಉದ್ಧಟನದಿಂದ ಮಾತನಾಡಿದ್ಧಾರೆ.

ರೋಗಿಗಳನ್ನು ಅಕ್ಕಪಕ್ಕ ಮಲಗಿಸಿ, ಒಬ್ಬರಿಂದ ಮತ್ತೊಬ್ಬರಿಗೆ ಐದು ನಿಮಿಷಕ್ಕೊಮ್ಮೆ ಆಕ್ಸಿಜನ್ ಮಾಸ್ಕ್ ಬದಲಾಯಿಸಲಾಗಿದೆ. ಮನುಷ್ಯರನ್ನು ಪ್ರಾಣಿಗಳ ರೀತಿ ಒಂದೇ ಕೊಠಡಿಗೆ ತುಂಬಿದ್ದಾರೆ. ಒಂದೆ ಹಾಸಿಗೆಯಲ್ಲಿ ಮಲಗಿದ್ದ ಇಬ್ಬರು ಮೂವರು ವಿಲವಿಲ ಒದ್ದಾಡಿ ಸಾವನ್ನಪ್ಪಿದ್ದಾರೆ. ಆ ದೃಶ್ಯ ನೋಡಲಾರದಷ್ಟು ಭೀಕರವಾಗಿತ್ತಂತೆ. ಮೃತಪಟ್ಟವರನ್ನು ಮತ್ತೊಂದು ಕೊಠಡಿಗೆ ಹಾಕಿದ್ದಾರೆ. ಹೆಣಗಳ ಸಂಖ್ಯೆ ಹೆಚ್ಚಾದಾಗ ಮತ್ತೆ ವಾರ್ಡ್‍ಗೆ ತಂದು ಹಾಕಿದ್ದಾರೆ.

ಮೃತ ಪಟ್ಟವರಲ್ಲಿ ಶೇ.80ರಷ್ಟು ಮಂದಿ ಬಿಪಿಎಲ್ ಕುಟುಂಬಕ್ಕೆ ಸೇರಿದವರು. ಅವರಲ್ಲಿ ಕೆಲವರಿಗೆ ಆಗಷ್ಟೆ ಮದುವೆಯಾಗಿತ್ತು, ಇನ್ನೂ ಕೆಲವರಿಗೆ ಮದುವೆ ನಿಶ್ಚಯವಾಗಿತ್ತು. ಶವಗಳನ್ನು ನಾಯಿಗಳ ರೀತಿ ಬಿಸಾಕಿದ್ದಾರೆ. ಯಾರದೋ ಹೆಣವನ್ನು ಮತ್ಯಾರದೋ ಕುಟುಂಬಕ್ಕೆ ನೀಡಿದ್ದಾರೆ.

ಕೆಲವರಿಗೆ ತಮ್ಮ ಕುಟುಂಬದ ಸದಸ್ಯರು ಸತ್ತಿರುವುದೇ ಗೋತಿರಲಿಲ್ಲ. ಹೆಣಗಳ ಬದಲಾವಣೆಯಿಂದ ಗೊಂದಲಗಳಾಗಿವೆ. ಈ ರೀತಿಯ ಬಹಳಷ್ಟು ಮಾಹಿತಿಗಳು ನಮ್ಮ ಬಳಿ ಇವೆ. ಅವನ್ನೆಲ್ಲಾ ವಿಧಾನಸಭೆಯಲ್ಲಿ ಮಾತನಾಡುತ್ತೇವೆ. ಅಧಿವೇಶನ ಕರೆಯಲಿ ಎಂದು ಕಾಯುತ್ತಿದ್ದೇವೆ ಎಂದರು.

ಮೃತಪಟ್ಟವರ ಕಿವಿಯೋಲೆ, ಮೂಗುನತ್ತು, ತಾಳಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಅಮಾನವೀಯವಾಗಿ ಕಿತ್ತುಕೊಂಡಿದ್ದಾರೆ. ಕಿವಿ, ಮೂಗು ಕಿತ್ತು ಹೋಗಿ ರಕ್ತ ಬರುತ್ತಿತ್ತು. ಮೃತಪಟ್ಟವರ ಜೇಬಿನಲ್ಲಿದ್ದನ್ನು ಕಸಿದುಕೊಂಡಿದ್ದಾರೆ.

ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ. ಚಾಮರಾಜನಗರ ಜನರ ಕಷ್ಟ ಕೇಳಿದರೆ ಕರಳು ಕಿತ್ತು ಬರುತ್ತದೆ. ಮುಖ್ಯಮಂತ್ರಿಯವರು ಚಾಮರಾಜನಗರಕ್ಕೆ ಭೇಟಿ ನೀಡಲಿ ಅಥವಾ ಸರ್ಕಾರದ ಪರವಾಗಿ ಯಾರನ್ನಾದರೂ ಕಳುಹಿಸಲಿ. ಮೃತಪಟ್ಟವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲಿ, ಅವರ ಕಷ್ಟ ಕೇಳಿದರೆ ಮುಂದೆ ನಿಮ್ಮ ಸರ್ಕಾರಕ್ಕೆ ಆರೋಗ್ಯ ಯೋಜನೆ ರೂಪಿಸಲು ಅನುಕೂಲವಾಗಲಿದೆ. ಕೈಮುಗಿದು ಕೇಳಿಕೊಳ್ಳುತ್ತೇನೆ, ಚಾಮರಾಜನಗರಕ್ಕೆ ಯಾರನ್ನಾದರೂ ಕಳುಹಿಸಿ ಅವರ ಕಷ್ಟ ಕೇಳಿ ಎಂದು ಬೇಡಿಕೊಳ್ಳುತ್ತೇನೆ ಎಂದರು.

ಚಾಮರಾಜನಗರ ಪ್ರಕರಣದಲ್ಲಿ ಯಾರನ್ನು ಹೊಣೆಗಾರರನ್ನಾಗಿ ಮಾಡಿಲ್ಲ. ಹೈಕೋರ್ಟ್ ನೇಮಿಸಿದ ಸಮಿತಿ ತಪ್ಪಿತಸ್ಥರನ್ನು ಗುರುತಿಸಿದೆ. ಅದರ ಪ್ರಕಾರವೂ ಕ್ರಮ ಕೈಗೊಂಡಿಲ್ಲ. ಈವರೆಗೆ ಒಂದು ಎಫ್‍ಐಆರ್ ಕೂಡ ಹಾಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ತಪ್ಪಿತಸ್ಥರ ವಿರುದ್ಧ ಎಫ್ ಐ ಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅಸಮದಾನ ವ್ಯಕ್ತ ಪಡಿಸಿದರು.

ಆರೋಗ್ಯ ಸಚಿವರು ಡಜನ್‍ಗ್ಟಲೆ ಜವಾಬ್ದಾರಿ ತೆಗೆದುಕೊಂಡರು. ಜನ ಸಾಮಾನ್ಯರ ಕಷ್ಟಕ್ಕೆ ಯಾಕೆ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮೃತ ಪಟ್ಟವರ ಕುಟುಂಬದವರನ್ನು ಭೇಟಿ ಮಾಡಿ ಏಕೆ ಸಾಂತ್ವಾನ ಹೇಳಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ನಮ್ಮ ಪಕ್ಷ ಇಂದಿನಿಂದ ಒಂದು ತಿಂಗಳ ವರೆಗೆ ಜನ ಸಂಪರ್ಕ ಸಭೆ ನಡೆಸಲಿದೆ.

ಸ್ಥಳೀಯ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮೃತಪಟ್ಟವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಲಿದ್ದಾರೆ. ಸರ್ಕಾರದ ಪರಿಹಾರಕ್ಕೆ ಅವರಿಂದ ಅರ್ಜಿ ಹಾಕಿಸಲಿದ್ದಾರೆ. ಕಾಂಗ್ರೆಸ್ ನಿಂದ ಪ್ರತ್ಯೇಕ ನಮೂನೆಗಳನ್ನು ಸಿದ್ಧ ಪಡಿಸಿದ್ದು, ಅದರಲ್ಲಿ ಮಾಹಿತಿ ಸಂಗ್ರಹಿಸುತ್ತೇವೆ, ಅದನ್ನು ತಹಸೀಲ್ದಾರ್, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ರಾಜ್ಯಮಟ್ಟದಲ್ಲೂ ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದರು.

ಸಾವಿಗೆ ಕೋವಿಡ್ ಕಾರಣ ಎಂದು ಕುಟುಂಬದ ಸದಸ್ಯರು ಪ್ರಮಾಣ ಪತ್ರ ಸಲ್ಲಿಸಿದರೆ ಅತಂಹ ಪ್ರಕರಣಕ್ಕೆ ಕೋವಿಡ್ ಸಾವಿನ ಪ್ರಕರಣ ಎಂದು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಸಾವಿನ ಪ್ರಕರಣಗಳ ಬಗ್ಗೆ ಸರ್ಕಾರ ಸಹಾನುಭೂತಿಯಿಂದ ನಡೆದುಕೊಳ್ಳಬೇಕು. ಕೆಲವರು ಸೋಂಕು ತಗುಲಿದರು ಆಸ್ಪತ್ರೆಗೆ ದಾಖಲಾಗಿಲ್ಲ. ಮನೆಯಲ್ಲೇ ಸಾವನ್ನಪ್ಪಿದ್ದಾರೆ, ಅಂತಹ ಪ್ರಕರಣಗಳನ್ನು ಪರಿಗಣಿಸಬೇಕು ಎಂದರು.

# ಸೈಕಲ್ ರ್ಯಾಲಿ:
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಜುಲೈ 7ರಂದು ಬೆಳಗ್ಗೆ ರಾಜ್ಯಾದ್ಯಂತ ಸೈಕಲ್ ರ್ಯಾಲಿ ನಡೆಸುತ್ತೇವೆ. ಸಂಜೆ ಕೋವಿಡ್ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಜನಸಂಪರ್ಕ ಸಭೆಯ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

Facebook Comments