ನಮ್ಮಿಂದಲೇ ಕಾಂಗ್ರೆಸ್ ಪಕ್ಷ ಎಂಬ ಭ್ರಮೆ ಬೇಡ : ಡಿ.ಕೆ ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಉಡುಪಿ: ‘ನಾವೆಲ್ಲರೂ ಕಾಂಗ್ರೆಸ್ ಪಕ್ಷದಲ್ಲಿರುವುದು ನಮ್ಮ ಸೌಭಾಗ್ಯ. ಪಕ್ಷ ಇದ್ದರೆ ಮಾತ್ರ ನಾವು ಅಧಿಕಾರಕ್ಕೆ ಬರಲು ಸಾಧ್ಯ. ಯಾರು ಕೂಡ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಬೇಡಿ. ಇಲ್ಲಿ ಎಲ್ಲರೂ ಕಾರ್ಯಕರ್ತರಾಗಿ ದುಡಿಯೋಣ. ನಮ್ಮಿಂದಲೇ ಪಕ್ಷ ಎಂದು ಭಾವಿಸಿದ್ದಾರೆ, ಅದು ಕೇವಲ ಭ್ರಮೆ, ಅದರಿಂದ ಹೊರಗೆ ಬನ್ನಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.

# ಉಡುಪಿಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ಹೇಳಿದ್ದಿಷ್ಟು:

‘ಇಲ್ಲಿ ಎನ್ಎಸ್ ಯುಐ, ಸೇವಾದಳ, ಯೂಥ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ರೈತ ಘಟಕ, ಕಾರ್ಮಿಕ ಘಟಕಗಳನ್ನು ಗಮನಿಸಿದ್ದೀರಿ. ಎಲ್ಲ ಘಟಕಗಳು ಮುಖ್ಯವೇ. ಎಲ್ಲರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕೆಳಗೆ ಕೆಲಸ ಮಾಡಬೇಕಿದೆ. ಎಲ್ಲರೂ ಕೂಡ ಕಡ್ಡಾಯವಾಗಿ ಪಂಚಾಯ್ತಿ ಮಟ್ಟದಲ್ಲಿ ಸಮಿತಿ ಮಾಡಬೇಕು. ಪ್ರತಿಯೊಬ್ಬರು ಬೂತ್ ಮಟ್ಟದಲ್ಲಿ ಶ್ರಮಿಸಬೇಕು. ಈ ಪಕ್ಷ ಕೇಡರ್ ಬೇಸ್ ಪಕ್ಷವಾಗಿ ಮಾಡಬೇಕು.

ನಾವು ಬೂತ್ ಮಟ್ಟದಲ್ಲಿ ಸಮಿತಿ ಮಾಡಲು ತೀರ್ಮಾನಿಸಿದ್ದು, ಅದರಲ್ಲಿ ಎಲ್ಲ ಘಟಕದವರು ಭಾಗಿಯಾಗಿರಬೇಕು. ಅದಕ್ಕಾಗಿ ಆಪ್ ಸಿದ್ಧಪಡಿಸುತ್ತಿದ್ದೇವೆ. ಎಲ್ಲೋ ಶಾಸಕರ ಮನೆಯಲ್ಲಿ ಕೂತು ಪಟ್ಟಿ ಮಾಡುವುದಲ್ಲ. ಬೂತ್ ಬಳಿ ಹೋಗಿ ಅಲ್ಲೇ ಆ ಸಮಿತಿ ರಚನೆಯಾಗಬೇಕು.

ಪಕ್ಷ ಇಲ್ಲವಾದ್ರೆ ನಾವ್ಯಾರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ನಾವು ನಮ್ಮ ಮನೆ ಸರಿ ಮಾಡಿಕೊಳ್ಳೋಣ. ಯಾರು ಕೂಡ ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನಾನು ಸಹಿಸಲ್ಲ. ನಿಮ್ಮ ಸಮಸ್ಯೆ ಏನೇ ಇದ್ದರೂ ನನ್ನ ಬಳಿ ಬಂದು ಮಾತನಾಡಿ, ನನ್ನಿಂದಲೇ ಕಾಂಗ್ರೆಸ್ ಪಕ್ಷ ಎಂದು ತಿಳಿದಿದ್ದರೆ ಅದು ಭ್ರಮೆ. ಅದರಿಂದ ಹೊರಗೆಬಂದು ಕೆಲಸ ಮಾಡಿ. ಕಾಂಗ್ರೆಸ್ ಪಕ್ಷದಲ್ಲಿರುವುದು ನಮ್ಮ ಸೌಭಾಗ್ಯ.

# ಕಷ್ಟದ ಸಮಯದಲ್ಲಿ ಜನರಿಗೆ ಕಾಂಗ್ರೆಸ್ ಬೆಂಬಲವಾಗಿತ್ತು ಎಂಬುದನ್ನು ಮನವರಿಕೆ ಮಾಡಿ:

ಪಕ್ಷದ ಸಂಘಟನೆಗಾಗಿ ನಾನು ಇಂದು ಇಲ್ಲಿಗೆ ಬಂದಿದ್ದೇನೆ. ಕೊರೋನಾ ಸಂದರ್ಭದಲ್ಲಿ ಇಡೀ ದೇಶದಲ್ಲಿ ಎಲ್ಲ ಕಚೇರಿಗಳನ್ನು ಮುಚ್ಚಿರಿ ಎಂದು ಹೇಳಿದರು. ಆದರೆ ನಾವು ಸುಮ್ಮನೆ ಕೂರಲಿಲ್ಲ. ನಾವು ನಮ್ಮದೇ ರೀತಿಯಲ್ಲಿ ಹೋರಾಟ ಮಾಡಿದೆವು. ನಮ್ಮದೇ ಆದ ಸಮಿತಿ ರಚಿಸಿ, ಬಡವರಿಗಾಗಿ ಸಹಾಯ ಮಾಡಿ, ಹೋರಾಟ ಮಾಡಿ, ಸರ್ಕಾರಕ್ಕೆ ಮಾರ್ಗದರ್ಶನ ನೀಡಿ, ಒತ್ತಡ ತಂದು ಶ್ರಮಿಕರಿಗೆ, ಕಾರ್ಮಿಕರಿಗೆ ಹಾಗೂ ರೈತರಿಗೆ ಸಹಾಯ ಮಾಡಲು ಮುಂದಾದೆವು.

ಹೊರ ರಾಜ್ಯ, ಜಿಲ್ಲೆಗಳಿಂದ ಬಂದ ಕಾರ್ಮಿಕರ ಬೆನ್ನಿಗೆ ನಿಂತೆವು. ಅವರನ್ನು ವಲಸಿಗರು ಎಂದು ಕರೆಯಬೇಡಿ. ಅವರನ್ನು ರಾಷ್ಟ್ರ ನಿರ್ಮಾತೃ ಎಂದು ಕರೆಯಲು ಆಗ್ರಹಿಸಿದೆ. ಅವರ ಪರವಾಗಿ ಹೋರಾಡಿ, ಉಚಿತ ಸಾರಿಗೆ ಕಲ್ಪಿಸಲು ರಾಜ್ಯದಿಂದ ಹೋರಾಟ ಮಾಡಲಾಯಿತು.

ನಂತರ ನೊಂದ ಶ್ರಮಿಕ ವರ್ಗದವರಿಗೆ ತಿಂಗಳಿಗೆ 10 ಸಾವಿರ ಕೊಡುವಂತೆ ಆಗ್ರಹಿಸಿದೆವು. ಸರ್ಕಾರ ಐದು ಸಾವಿರ ಘೋಷಿಸಿತು. ಆದರೆ ಇದುವರೆಗೂ ಶೇ.10ರಷ್ಟು ಜನರಿಗೆ ಆ ಪರಿಹಾರ ನೀಡಲು ಸಾಧ್ಯವಾಗಲಿಲ್ಲ. ಇನ್ನು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ರಕಟಿಸಿತು. ಯಾರಿಗಾದ್ರು ಏನಾದರೂ ಸಿಕ್ಕಿತಾ? ಇಲ್ಲ. ಈ ದೇಶದ ಒಬ್ಬ ಸಾಮಾನ್ಯ ಜನನಿಗೂ ಪ್ರಯೋಜನ ಸಿಕ್ಕಿಲ್ಲ.

ನಿಮ್ಮ ಕಷ್ಟ ಕಾಲದಲ್ಲಿ ಯಾರಿದ್ದರು ಎಂಬುದನ್ನು ನಾವು ಜನರಿಗೆ ತಿಳಿಸಬೇಕಿದೆ. ನಾವು ನಮ್ಮ ಆಚಾರ ವಿಚಾರ ಬದಲಾಯಿಸಿಕೊಳ್ಳಬೇಕಿದೆ. ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಬೇಕಿದೆ. ಎಲ್ಲರ ಬಳಿಯೂ ಮೊಬೈಲ್ ಇದೆ. ಹೀಗಾಗಿ ನಾನು ಅಧಿಕಾರ ತೆಗೆದುಕೊಳ್ಳುವಾಗ ಹೊಸ ಮಾದರಿಯಲ್ಲಿ ಕಾರ್ಯಕ್ರಮ ಮಾಡಿದೆ. ಆ ಕಾರ್ಯಕ್ರಮಕ್ಕೆ ದೊಡ್ಡಮಟ್ಟದಲ್ಲಿ ಪ್ರತಿಕ್ರಿಯೆ ಸಿಕ್ಕಿತು.

# ನಿಮ್ಮ ಪ್ರೀತಿಯನ್ನು ಮರೆಯುವುದಿಲ್ಲ:

ಜಿಲ್ಲೆಯ ಜನ ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲರೂ ನನಗೆ ಹಾಗೂ ನಮ್ಮ ನಾಯಕರಿಗೆ ಭವ್ಯ ಸ್ವಾಗತ ನೀಡಿದ್ದೀರಿ. ನಿನ್ನೆ ಇಲ್ಲಿಗೆ ಬಂದಾಗ ಇಲ್ಲಿನ ಜನ ನಾನು ಜೈಲಲ್ಲಿ ಇದ್ದಾಗ ನನಗಾಗಿ ಕಮಲಶಿಲೆ ದೇವಾಲಯದಲ್ಲಿ ಹರಕೆ ಮಾಡಿಕೊಂಡ ವಿಚಾರ ತಿಳಿಯಿತು. ನೀವು ಈ ದೇವಾಲಯಕ್ಕೆ ಬರಲೇಬೇಕು ಎಂದು ಕೇಳಿಕೊಂಡರು. ರಾಜ್ಯದ ಮೂಲೆ ಮೂಲೆಯಲ್ಲಿ ಜನ ನನಗೆ ಆಗಿರುವ ಅನ್ಯಾಯ ಸರಿಹೋಗಬೇಕು ಅಂತಾ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ.

ನಿಮ್ಮೆಲ್ಲರ ಪೂಜಾಫಲದಿಂದ ನಾನಿಂದು ಪಕ್ಷದ ಅಧ್ಯಕ್ಷನಾಗಿ ನಿಮ್ಮಮುಂದೆ ಬಂದು ನಿಂತಿದ್ದೇನೆ. ನಿಮ್ಮ ಈ ಪ್ರೀತಿಗೆ ಧನ್ಯವಾದಗಳು. ನನಗೆ ಅನ್ಯಾಯ ಆಗಿದೆ ಎಂದು ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಅಹ್ಮದ್ ಪಟೇಲರು, ಅಂಬಿಕಾ ಸೋನಿ ಅವರು ತಿಹಾರ್ ಜೈಲಿಗೆ ಬಂದು ನಮಗೆ ಧೈರ್ಯ ತುಂಬಿದ್ದರು. ಅವರು ಕೊಟ್ಟ ಶಕ್ತಿ ಡಿ.ಕೆ ಶಿವಕುಮಾರ್ ಗೆ ಮಾತ್ರವಲ್ಲ. ಇಡೀ ದೇಶದ ಕಾರ್ಯಕರ್ತರಿಗೆ ಕೊಟ್ಟ ಶಕ್ತಿ ಅದು.

# ಹಿರಿಯ ನಾಯಕರ ಸ್ಮರಣೆ:

ನಾನು ಹಾಗೂ ವಿನಯ್ ಅವರು ಒಟ್ಟಿಗೆ ವಿದ್ಯಾರ್ಥಿಯಾದಾಗಿನಿಂದ ರಾಜಕೀಯಕ್ಕೆ ಪ್ರವೇಶಿಸಿದೆವು. ನಾವು ವಿದ್ಯಾರ್ಥಿ ಸಂಘಟನೆಗಳಲ್ಲಿ ಸೇರಿದ್ದೆವು. ಪಕ್ಷದಲ್ಲಿರುವ ಯುವ, ವಿದ್ಯಾರ್ಥಿ, ಮಹಿಳಾ ಹಾಗೂ ಇತರೆ ಘಟಕಗಳು ಪಕ್ಷದ ಆಧಾರಸ್ತಂಭ. ಆಸ್ಕರ್ ಫರ್ನಾಂಡಿಸ್, ಜನಾರ್ಧನ ಪೂಜಾರಿಯಂತಹ ನಾಯಕರು ತಮ್ಮ ಅವಧಿಯಲ್ಲಿ ಹತ್ತಾರು ನಾಯಕರನ್ನು ಬೆಳೆಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರು ಧೀಮಂತ ನಾಯಕ. ಅವರ ಮಾರ್ಗದರ್ಶನ ನಮಗೆ, ನಿಮಗೆ ಹಾಗೂ ಪಕ್ಷಕ್ಕೆ ಅವಶ್ಯಕತೆ ಇದೆ. ಅವರ ಆರೋಗ್ಯ ಇನ್ನು ಗಟ್ಟಿಯಾಗಲಿ ಎಂದು ನಾವು ನೀವು ಪ್ರಾರ್ಥಿಸೋಣ.’

Facebook Comments

Sri Raghav

Admin