“ಸ್ವತಂತ್ರ್ಯ ಹೋರಾಟ ಇನ್ನೂ ಮುಗಿದಿಲ್ಲ, ಕೋಮು ಶಕ್ತಿಗಳಿಂದ ದೇಶವನ್ನು ಮುಕ್ತಗೊಳಿಸಬೇಕಿದೆ” : ಡಿಕೆಶಿ
ಬೆಂಗಳೂರು, ಆ.15- ಸ್ವಾತಂತ್ರ ಬಂದು 74 ವರ್ಷವಾದರೂ ಸ್ವಾತಂತ್ರ್ಯ ಹೋರಾಟ ಇನ್ನೂ ಮುಗಿದಿಲ್ಲ. ಕೋಮುಭಾವನೆಗಳನ್ನು ಕೆರಳಿಸುವ ಶಕ್ತಿಗಳಿಂದ ದೇಶವನ್ನು ಮುಕ್ತಗೊಳಿಸಲು ಎರಡನೆ ಸುತ್ತಿನ ಸಂಗ್ರಾಮಕ್ಕೆ ನಾವೇಲ್ಲಾ ಸಿದ್ದರಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಮತಾಂತರ, ಕೋಮುವಾದದ ವಿರುದ್ಧ ದೇಶಕ್ಕಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದರು.
ಅಂಬೇಡ್ಕರ್ ಬರೆದ ಸಂವಿಧಾನವನ್ನು ಯಾಕೆ ಒಪ್ಪಬೇಕು ಎಂಬ ಮನಸ್ಥಿತಿ ಇರುವ ಬಿಜೆಪಿಯವರು ನಾವು ಅಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು. ಬದಲಾಯಿಸಿಯೇ ಬದಲಾಯಿಸುತ್ತೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ.
ಕೋಮುವಾದಿಗಳಿಂದ ದೇಶವನ್ನು ರಕ್ಷಿಸಲು ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ದೇಶದ ಜನತೆ ಹೋರಾಟ ನಡೆಸಬೇಕಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ನ ಪ್ರಧಾನಿ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೇರವೇರಿಸುವ ದಿನಗಳನ್ನು ನಾವು ಕಾಣಲಿದ್ದೇವೆ ಎಂದು ಹೇಳಿದರು.
ಇದು ಯುದ್ಧಕಾಲ, ಸೈನಿಕರಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಹಾಗೇ ಕಾರ್ಯಕರ್ತರಿಲ್ಲದೆ ಈ ಸಂಗ್ರಾಮವನ್ನು ಜಯಿಸಲು ಆಗುವುದಿಲ್ಲ. ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟವನು. ಕಾಂಗ್ರೆಸ್ನ ಎಲ್ಲ ಮುಖಂಡರು, ಕಾರ್ಯಕರ್ತರು ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು.
ಕೋಮುಶಕ್ತಿಗಳಿಂದ ದೇಶವನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.ಕಾಂಗ್ರೆಸ್ ಹುಟ್ಟಿದ್ದೆ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ, ಕಾಂಗ್ರೆಸ್ ಹೋರಾಟದಿಂದಲೇ ಸ್ವಾತಂತ್ರ್ಯ ಸಿಕ್ಕಿದೆ. ನಾವು ಅಕಾರಕ್ಕಾಗಿ ರಾಜಕಾರಣ ಮಾಡುವುದಿಲ್ಲ. ಜನಾಂದೋಲನಕ್ಕಾಗಿ ಕೆಲಸ ಮಾಡುತ್ತೇವೆ.
ಕೋಮುಶಕ್ತಿಗಳ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಈಗ ಬದಲಾವಣೆ ಬಯಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯಗಳನ್ನು ಗೌರವಿಸಬೇಕು. ಸ್ವತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಸ್ಮರಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಕೋಮು ಗಲಭೆ ಸೃಷ್ಟಿಸುವ ಅವಕಾಶ ಸ್ವಲ್ಪದರಲ್ಲೇ ಬಿಜೆಪಿಗೆ ತಪ್ಪಿ ಹೋಗಿದೆ.
ಜನರಲ್ಲಿ ದ್ವೇಷದ ಬಿಜ ಬಿತ್ತಲು ಸಂಘ ಪರಿವಾರ ನಡೆಸಿದ ಸಂಚು ಫಲ ನೀಡಲಿಲ್ಲ. ಇದೇ ರೀತಿ ದೇಶದೆಲ್ಲೆಡೆ ಕೋಮು ವಿಷ ಬೀಜ ಬಿತ್ತುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹಮದ್, ನಾರಾಯಣಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.