ತಾಕತ್ತಿದ್ದರೆ ಪಾದಯಾತ್ರೆ ನಿಲ್ಲಿಸಿ : ಗುಡುಗಿದ ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.6- ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ನಿಲ್ಲಿಸಲು ಗೃಹ ಸಚಿವರು ಇನ್ನೊಂದು ಜನ್ಮ ಹುಟ್ಟಿ ಬರಬೇಕು. ತಾಕತ್ತಿದ್ದಿದ್ದರೆ ನಮ್ಮನ್ನು ತಡೆದು ನಿಲ್ಲಿಸಲಿ, ನಾವು ಏನೆಂದು ತೋರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಾಕುತ್ತಿರುವ ಗೊಡ್ಡು ಬೆದರಿಕೆಗಳಿಗೆಲ್ಲಾ ಬೆದರುವುದಿಲ್ಲ. ನಮ್ಮನ್ನು ಜೈಲಿಗೆ ಹಾಕಿದರೂ ಹೆದರುವುದಿಲ್ಲ.

ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಪುನರುಚ್ಚರಿಸಿದರು. ಕೋವಿಡ್ ನಿಯಮಗಳಿಗೆ ನಾವು ಗೌರವ ಕೊಡುತ್ತೇವೆ. ಅದೇ ರೀತಿ ಸರ್ಕಾರದವರೂ ಗೌರವ ಕೊಡಬೇಕು. ವಿಧಾನಸೌಧದ ಬ್ಯಾಂಕ್ವೆಟ್‍ಹಾಲ್‍ನಲ್ಲಿ ನಡೆಯುತ್ತಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲರೂ ಗುಂಪು ಗುಂಪಾಗಿ ಸೇರಿದ್ದಾರೆ. ಗೃಹ ಸಚಿವರು ಇದರ ವಿರುದ್ಧ ಏಕೆ ಮಾತನಾಡುವುದಿಲ್ಲ. ಸಚಿವರು, ಶಾಸಕರು ನಿಯಮಗಳ ಉಲ್ಲಂಘನೆ ಬಗ್ಗೆ ಮೌನವೇಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸಿಗರು ಜೈಲಿಗೆ ಹೋಗಲು ಸಿದ್ದ. ಪಾದಯಾತ್ರೆಗೆ ಎಲ್ಲರೂ ಬರುತ್ತಾರೆ. ಗೃಹ ಸಚಿವರಿಗೆ ತಾಕಕ್ಕಿದ್ದರೆ ತಡೆದು ನಿಲ್ಲಿಸಲಿ. 40 ವರ್ಷಗಳಿಂದ ನಮಗೂ ರಾಜಕಾರಣದ ಅನುಭವ ಇದೆ. ನಿಯಮಗಳು ಗೊತ್ತಿವೆ. ಹೆದರಿಕೆ, ಬೆದರಿಕೆಗಳು ನಮ್ಮ ಬಳಿ ನಡೆಯುವುದಿಲ್ಲ. ನಿಯಮ ಮಾಡಿದವರು ಮೊದಲು ಅದನ್ನು ಪಾಲಿಸಲಿ ಎಂದರು.

ಬಡಪಾಯಿಗಳಿಗೆ ಒಂದು ನಿಯಮ, ಸರ್ಕಾರ ನಡೆಸುವವರಿಗೆ ಮತ್ತೊಂದು ನಿಯಮ ಇದೆಯೇ ? ಸಮಾರಂಭ, ಮದುವೆಗಳಿಗೆ ನೂರು ಜನರಿಗೆ ಮಿತಿಗೊಳಿಸಿದ್ದಾರೆ. ಸರ್ಕಾರ ನಡೆಸುವ ಕಾರ್ಯಕ್ರಮಗಳಿಗೆ ಸಾವಿರಾರು ಜನ ಸೇರುತ್ತಿದ್ದಾರೆ. ಬೀದಿ ಬದಿ ವ್ಯಾಪಾರ ಮಾಡುವ ಸಣ್ಣ ವ್ಯವಹಾರಸ್ಥರಿಗೆ ದಂಡ ಹಾಕುತ್ತಾರೆ.

ವೀಕೆಂಡ್ ಕಫ್ರ್ಯೂ ಹೆಸರಿನಲ್ಲಿ ಕಿರುಕುಳ ನೀಡುತ್ತಾರೆ. ಜನ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಆದರೆ, ಜನಪ್ರತಿನಿಗಳಿಗೆ ಯಾವ ನಿಯಮಗಳೂ ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Facebook Comments