“ಯಡಿಯೂರಪ್ಪನವರ 1610 ಕೋಟಿ ಪ್ಯಾಕೇಜ್‍ನಲ್ಲಿ ಬಡವರಿಗೆ 1 ರೂ. ಕೂಡ ತಲುಪಿಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 13- ಕೇಂದ್ರ ಸರ್ಕಾರ ಈ ಮೊದಲು ಘೋಷಿಸಿ 1.60 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್  ಜನ ಸಾಮಾನ್ಯರಿಗೆ ಒಂದು ರೂಪಾಯಿ ಕೂಡ ತಲುಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ಷೇಪಿಸಿದರು.

ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿ, 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಪ್ರಕಟಿಸಿರುವುದು ಸಂತೋಷ. ಆದರೆ ಇತ್ತೀಚೆಗಷ್ಟೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ವಿವಿಧ ವರ್ಗಗಳಿಗೆ 1610 ಕೋಟಿ ಪ್ಯಾಕೇಜ್ ಘೋಷಿಸಿದರು.

ಅದಕ್ಕೂ ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ 1.60 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದರು. ಅದರಲ್ಲಿ ಯಾರಿಗೂ ಲಾಭವಾಗಿಲ್ಲ, ಒಬ್ಬರಿಗೂ ಪ್ಯಾಕೇಜ್ ತಲುಪಿಲ್ಲ. ಕೆಲವು ನಿರ್ಮಾಣ ಕಾರ್ಮಿಕರಿಗೆ ಒಂದೆರೆಡು ಸಾವಿರ ರೂಪಾಯಿಗಳು ಖಾತೆಗೆ ಹೋಗಿರುವುದು ಬಿಟ್ಟರೆ ಬೇರೆ ಲಾಭವಾಗಿಲ್ಲ ಎಂದು ಆರೋಪಿಸಿದರು.

ವಲಸೆ ಕಾರ್ಮಿಕರು ರಾಜ್ಯದಿಂದ ಹೊರ ಹೋಗಲು, ಹೊರ ರಾಜ್ಯದಿಂದ ಇಲ್ಲಿಗೆ ಬರಲು ರಾಜ್ಯ ಸರ್ಕಾರ ಹಣ ಕಟ್ಟಲು ಏನಾಗಿತ್ತು. ಇವರ ಘೋಷಣೆಗಳೆಲ್ಲ ಬರೀ ಟೊಳ್ಳು. ದೇಶದಲ್ಲಿ ಭಾವನಾತ್ಮಕವಾಗಿ ರಾಜಕಾರಣ ಮಾಡಲಾಗುತ್ತಿದೆ.

ಜನರಿಗೆ ಕೊಟ್ಟ ಮಾತನ್ನು ಮೊದಲು ಬಿಜೆಪಿ ಸರ್ಕಾರಗಳು ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದರು. ಕೇಂದ್ರ ಸರ್ಕಾರದ ಪ್ಯಾಕೇಜ್ ಬಗ್ಗೆ ಸಂಜೆ ಚರ್ಚೆ ಮಾಡಿ ನಂತರ ಪ್ರತಿಕ್ರಿಯೆ ನೀಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Facebook Comments

Sri Raghav

Admin